ನವದೆಹಲಿ: ಎರಡನೇ ವಿಶ್ವ ಯುದ್ಧದಲ್ಲಿ ಜರ್ಮನಿ ವಿರುದ್ಧ ಜಯಗಳಿಸಿದ್ದರ ನೆನಪಿಗಾಗಿ ಜೂನ್ 24ರಂದು ರಷ್ಯಾ ಮಾಸ್ಕೋ ವಿಕ್ಟರಿ ದಿನವನ್ನು ಆಚರಿಸುತ್ತಿದ್ದು, ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಭಾಗಿಯಾಗಲಿದ್ದಾರೆ.
ಎರಡನೇ ಮಹಾಯುದ್ಧದಲ್ಲಿ ಜಯ ಸಾಧಿಸಿ 75 ವರ್ಷಗಳು ತುಂಬಿದ್ದು, ಇದಕ್ಕಾಗಿ ಭಾರತದ ಮೂರೂ ಪಡೆಗಳ ಕೆಲವೊಂದು ತುಕಡಿಗಳು ಕೂಡಾ ಪಾಲ್ಗೊಂಡು ರೆಡ್ ಸ್ಕ್ವೇರ್ನಲ್ಲಿ ನಡೆಯಲಿರುವ ಪರೇಡ್ನಲ್ಲಿ ಭಾಗವಹಿಸುವ ಸಾಧ್ಯತೆ ದಟ್ಟವಾಗಿದೆ. ಈ ತುಕಡಿಯಲ್ಲಿ ಕರ್ನಲ್ ರ‍್ಯಾಂಕ್‌ನ ಸುಮಾರು 75 ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ಸೇನಾ ಮೂಲಗಳು ಸ್ಪಷ್ಟನೆ ನೀಡಿವೆ.
ಇದಕ್ಕೂ ಮೊದಲು ಮಾರ್ಚ್ 9ಕ್ಕೆ ಈ ವಿಜಯೋತ್ಸವ ದಿನ ಆಚರಿಸಲಾಗಬೇಕಿತ್ತು. ಆದರೆ, ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಈ ವಿಜಯೋತ್ಸವ ದಿನವನ್ನು ಮುಂದೂಡಲಾಗಿತ್ತು. ಈಗ ಜೂನ್ 24ಕ್ಕೆ ಮಾಸ್ಕೋ ವಿಜಯೋತ್ಸವ ದಿವಸವನ್ನು ಆಚರಿಸಲಾಗುತ್ತಿದೆ.
ಮಾಸ್ಕೋ ವಿಕ್ಟರಿ ದಿನದಲ್ಲಿ ಪಾಲ್ಗೊಳ್ಳುವ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ರಷ್ಯಾ ಪ್ರವಾಸ ಮಾಡಲಿದ್ದು, ಜೂನ್ 24ರ ಸಮಾರಂಭದಲ್ಲಿಯೂ ಪಾಲ್ಗೊಳ್ಳಿದ್ದೇನೆ. ಜೊತೆಗೆ ಭಾರತ, ರಷ್ಯಾ ಸಂಬಂಧ ಸುಧಾರಣೆಯ ಮಾತುಕತೆಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಚೀನಾ- ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲಸಿರುವ ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ರಷ್ಯಾ ಭೇಟಿ ಭಾರಿ ಕುತೂಹಲ ಕೆರಳಿಸಿದೆ.