ನವದೆಹಲಿ:ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ನಡೆದ ಎರಡು ವಾರಗಳ ಬಳಿಕ ಲಡಾಖ್ ಗಡಿಭಾಗದ ಪರಿಸ್ಥಿತಿ ಪರಿಶೀಲಿಸಿದ ಪ್ರಧಾನಿ ಮೋದಿ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಧನ್ಯವಾದ ಅರ್ಪಿಸಿದ್ದಾರೆ.
ಲಡಾಖ್‌ಗೆ ಮೋದಿ ಅವರ ಅಚ್ಚರಿಯ ಭೇಟಿಯಿಂದ ಭಾರತೀಯ ಸೇನೆಯ ಆತ್ಮಸ್ಥೈರ್ಯ ಹೆಚ್ಚಾಗಿದೆ. ಲಡಾಖ್ ಮುಂಚೂಣಿ ಸೇನಾ ನೆಲೆಗೆ ಭೇಟಿ ನೀಡಿದ ಮೋದಿ, ಸೈನಿಕರ ಯೋಗಕ್ಷೇಮ ವಿಚಾರಿಸಿರುವುದು ಅತ್ಯಂತ ಶ್ಲಾಘನೀಯ ಎಂದು ರಾಜನಾಥ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದೇಶದ ಗಡಿಗಳು ಭಾರತದ ಸೇನೆಯಿಂದ ಯಾವಾಗಲೂ ಸುರಕ್ಷಿತವಾಗಿರುತ್ತವೆ. ಸೈನಿಕರನ್ನು ಭೇಟಿ ಮಾಡಲು ಮತ್ತು ಪ್ರೋತ್ಸಾಹಿಸಲು ಪ್ರಧಾನಿ ಮೋದಿ ಅವರು ಲಡಾಖ್‌ಗೆ ಭೇಟಿ ನೀಡಿರುವುದು ಖಂಡಿತವಾಗಿಯೂ ಸೈನ್ಯದ ಮನೋಬಲವನ್ನು ಹೆಚ್ಚಿಸಿದೆ. ಪ್ರಧಾನ ಮಂತ್ರಿಯ ನಡೆಯನ್ನು ನಾನು ಶ್ಲಾಘಿಸುತ್ತೇನೆ ಮತ್ತು ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಅವರೊಂದಿಗೆ ರಕ್ಷಣಾ ಇಲಾಖೆ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನಾರವಾನೆ ಇದ್ದರು. ಮೋದಿ ಅವರು ಇಂದು ಬೆಳಗ್ಗೆ ನಿಮ್ಮೂ ತಲುಪಿದರು. ಈ ಪ್ರದೇಶ 11,000 ಅಡಿ ಎತ್ತರದಲ್ಲಿದೆ. ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದರು.
ಚೀನಾದೊಂದಿಗೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ಮಧ್ಯೆ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಲು ರಕ್ಷಣಾ ಸಚಿವರು ಇಂದು ಲಡಾಖ್‌ಗೆ ಭೇಟಿ ನೀಡಬೇಕಿತ್ತು.