ನವದೆಹಲಿ:ರಕ್ಷಣಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು 3 ಸೇನಾ ಮುಖ್ಯಸ್ಥರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಲಡಾಖ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ.
ಸಭೆಯಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವನೆ, ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಭಾಗವಹಿಸಿದ್ದರು.
ಎಲ್‌ಎಸಿ ಉದ್ದಕ್ಕೂ ಚೀನಾ ಸೇನೆ ನಡೆಸುವ ಯಾವುದೇ ಆಕ್ರಮಣಕಾರಿ ಚಟುಕಟಿಕೆಯನ್ನು ಎದುರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್‌ನಲ್ಲಿನ ಚೀನಾದ ಯಾವುದೇ ದುಷ್ಕೃತ್ಯಕ್ಕೆ ಸೂಕ್ತ ಉತ್ತರ ನೀಡಲು ಭಾರತೀಯ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಇಂದಿನಿಂದ ಚೀನಾದ ಗಡಿಯನ್ನು ಕಾಪಾಡುವಲ್ಲಿ ಭಾರತವು ವಿಭಿನ್ನ ಯುದ್ಧತಂತ್ರದ ವಿಧಾನವನ್ನು ಅಳವಡಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಅತ್ತ ಜೂನ್ 24 ರಂದು ವಿಕ್ಟರಿ ಡೇ ಮಿಲಿಟರಿ ಪರೇಡ್‌ಗೆ ಸಾಕ್ಷಿಯಾಗಲು ರಕ್ಷಣಾ ಸಚಿವರು ನಾಳೆ ರಷ್ಯಾದ ಮಾಸ್ಕೋಗೆ ತೆರಳಲಿದ್ದಾರೆ. ಎರಡನೇ ಮಹಾಯುದ್ಧದಲ್ಲಿನ ವಿಜಯದ 75 ನೇ ವಾರ್ಷಿಕೋತ್ಸವದ ಪ್ರಯುಕ್ತ ಜೂನ್ 24 ರಂದು ರಷ್ಯಾ, ಮಿಲಿಟರಿ ಪರೇಡ್ ಹಮ್ಮಿಕೊಂಡಿದೆ.