ಪಾಟ್ನಾ:ಚೀನಾ ಭಾರತದ ಭೂಪ್ರದೇಶದ 1,200 ಕಿಲೋಮೀಟರ್ ನಷ್ಟು ಒಳನುಗ್ಗಿದೆ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದ ಗೌರವವನ್ನು ಕಾಪಾಡುವಲ್ಲಿ ಸೈನಿಕರು ಪ್ರದರ್ಶಿಸಿದ ಶೌರ್ಯಕ್ಕಾಗಿ ಸಶಸ್ತ್ರ ಪಡೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಚುನಾವಣೆ ಹಿನ್ನೆಲೆ ನಾಲ್ಕು ಸರಣಿ ಜಾಥಾಗಳ ಉದ್ದೇಶಿಸಿ ಮಾತನಾಡಿದ ಸಿಂಗ್, ಬಾಲಾಕೋಟ್ ವಾಯುದಾಳಿಗಳಿಗೆ ಪುರಾವೆ ಕೋರಿದ್ದಕ್ಕಾಗಿ ಕಿಡಿಕಾರಿದ ಅವರು, ಪಾಕಿಸ್ತಾನ ಸಚಿವ ಫವಾದ್ ಚೌಧ್ರಿ ಅವರ ಇತ್ತೀಚಿನ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
"ಚೀನಾ ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ ಎಂದು ಹೇಳುವ ಮೂಲಕ ಪ್ರತಿಪಕ್ಷಗಳು ಜನರನ್ನು ದಾರಿತಪ್ಪಿಸುತ್ತಿವೆ. ಆದರೆ ನಮ್ಮ ಸೇನೆ ದೇಶದ ಗೌರವದ ರಕ್ಷಣೆಗೆ ಶೌರ್ಯ ಮತ್ತು ಪರಾಕ್ರಮ ಮೆರೆಯುತ್ತಿದ್ದಾರೆ " ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಪಂಜಾಬ್‌ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಮೋದಿ ಸರ್ಕಾರವು "1200 ಕಿಲೋಮೀಟರ್ ಭಾರತ ಮಾತೆಯನ್ನು ಚೀನಾಕ್ಕೆ ನೀಡಿದೆ" ಎಂದು ಆರೋಪಿಸಿದ್ದರು.
"ವಿಶ್ವದ ಯಾವುದೇ ಶಕ್ತಿಯಿಂದ ಭಾರತದಲ್ಲಿ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಕಾಂಗ್ರೆಸ್ಗೆ ಏನಾಗಿದೆ, ರಾಷ್ಟ್ರೀಯ ಸಮಗ್ರತೆಯ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಲಾಗುವುದಿಲ್ಲವೆ" ಎಂದು ರಾಜನಾಥ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.