ಚೆನ್ನೈ:ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಮತ್ತು ರಾಜಕೀಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಗಾಸಿಪ್ ಸುದ್ದಿಗಳು ಇದೀಗ ಅವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿವೆ. ಗೊಂದಲಕ್ಕೀಡಾದ ರಜನಿ ಅಭಿಮಾನಿಗಳು ಅವರ ಮನೆಗೆ ಬಂದು ರಾಜಕೀಯದಿಂದ ಹಿಂದೆ ಸರಿಯದಂತೆ ಮತ್ತು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವಂತೆ ಉಪವಾಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಓಟ್ ಫಾರ್ ರಜನಿ ಎಂದು ಟ್ವೀಟರ್ನಲ್ಲಿ ಅವರ ಆರೋಗ್ಯ ಮತ್ತು ರಾಜಕೀಯದ ಬಗ್ಗೆ ದೊಡ್ಡ ಮಟ್ಟದ ಅಭಿಯಾನ ನಡೆಸಿರುವ ಅವರ ಅಭಿಮಾನಿ ಬಳಗ, ದೇವರು ಅವರನ್ನು ನೋಡಿಕೊಳ್ಳುವನು. ಶೀಘ್ರದಲ್ಲೇ ಗುಣಮುಖರಾಗಿ ತಲೈವರ್ ಬಂದೇ ಬರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಸುಮಾರು ಎರಡು ದಶಕಗಳಿಂದ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹ ನಡೆಯುತ್ತಲೇ ಇತ್ತು. ರಜನಿ ಮಕ್ಕಳ್ ಮಂಡ್ರಮ್ (ಆರ್ಎಂಎಂ) ರಾಜಕೀಯ ಸಂಘಟನೆ ಸ್ಥಾಪಿಸುವ ಮೂಲಕ ಕೊನೆಗೊಂದು ದಿನ ಅವರ ಹುಟ್ಟು ಹಬ್ಬದ ನಿಮಿತ್ತ ಅದು ನಿಜವೂ ಆಯಿತು. 1990ರ ದಶಕದಿಂದ ರಾಜಕೀಯಕ್ಕೆ ಸೇರುವ ಇಂಗಿತವನ್ನು ವ್ಯಕ್ತಪಡಿಸುತ್ತಲೇ ಇದ್ದ ರಜನಿಕಾಂತ್, ಅದನ್ನು 2017ರ ಡಿಸೆಂಬರ್ 31ರಂದು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಇದೀಗ ಅವರ ರಾಜಕೀಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಗಮನಿಸಿದರೆ ರಜನಿ ರಾಜಕೀಯದಿಂದ ದೂರ ಸರಿಯಲಿದ್ದಾರೆ ಎಂಬ ಅನುಮಾನ ಕಾಡಲಾರಂಭಿಸಿದೆ. ಆದರೆ, ಈ ಸುಳ್ಳು ಸುದ್ದಿಯನ್ನು ಸ್ವತಃ ರಜನಿ ಅವರೇ ಅಲ್ಲಗಳೆದಿದ್ದಾರೆ.
ಸ್ವತಃ ರಜನಿಕಾಂತ್ ಅವರೇ ಬರೆದಿರುವ ವಿಷಯವೊಂದರಿಂದ ಈ ಅನುಮಾನ ತಮಿಳು ನಾಡಿನ ರಾಜಕೀಯ ವಲಯದಲ್ಲಿ ಹೊಸ ವ್ಯಾಖ್ಯಾನ ಹುಟ್ಟುಹಾಕಿದೆ. ಕೋವಿಡ್-19 ಸಾಂಕ್ರಾಮಿಕ, ತಮ್ಮ ವಯಸ್ಸು, ಆರೋಗ್ಯ, ಕೋವಿಡ್ಗೆ ಲಸಿಕೆ ಸಿಗುವ ಬಗ್ಗೆ ಅನಿಶ್ಚಿತತೆ... ಇವೆಲ್ಲವುಗಳಿಂದ ತಾವು ರಾಜಕೀಯವನ್ನು ತೊರೆಯುವ ನಿರ್ಧಾರ ಮಾಡುವುದಾಗಿ ಹೇಳಿದಂತೆ ಹೀಗೊಂದಿಷ್ಟು ಸುದ್ದಿಗಳು ಗೊಂದಲ ಸೃಷ್ಟಿಸಿವೆ.
ಕೊರೊನಾಗೆ ಲಸಿಕೆ ಯಾವಾಗ ಬರಲಿದೆಯೋ ತಿಳಿದಿಲ್ಲ. ಬಂದರೂ ಅದಕ್ಕೆ ನಿಮ್ಮ ದೇಹ ಸ್ಪಂದಿಸಲಿಯೋ ಇಲ್ಲವೋ ಎಂಬುದರ ಬಗ್ಗೆ ಖಚಿತತೆ ಇಲ್ಲ. ಈಗ ನಿಮಗೆ 70 ವರ್ಷ ವಯಸ್ಸು. ಕಿಡ್ನಿ ಕಸಿ ಕೂಡ ಆಗಿದೆ. ನಿಮಗೆ ಸುಲಭವಾಗಿ ಸೋಂಕು ತಗುಲಬಹುದು. ನೀವು ಜನರನ್ನು ಭೇಟಿ ಆಗುವಂತಿಲ್ಲ ಎಂದು ವೈದ್ಯರು ತಮಗೆ ಸಲಹೆ ನೀಡಿದ್ದಾರೆ ಅಂತ ರಜನಿಕಾಂತ್ ಆ ಪತ್ರದಲ್ಲಿ ಬರೆದಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದು ಅವರು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬರ್ಥದಲ್ಲಿ ಹೇಳಿರುವ ಸಂದೇಶವುಳ್ಳದ್ದಾಗಿದ್ದರಿಂದ ತಮಿಳುನಾಡು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಈಡು ಮಾಡಿತ್ತು.
ಚರ್ಚೆ ಎಲ್ಲೇ ಮೀರುತ್ತಿದ್ದಂತೆ ರಜನಿ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಪತ್ರದಲ್ಲಿರುವ ಈ ಅಂಶಗಳು ಸತ್ಯ ಎಂದು ತಿಳಿಸಿರುವ ತಲೈವಾ, ಆದರೆ, ಅಭಿಮಾನಿಗಳನ್ನು ಉದ್ದೇಶಿಸಿಸಿ ನಾನು ಬರೆದಿರುವೆ ಎಂದು ಹೇಳಲಾಗುತ್ತಿರುವ ಪತ್ರ ಮಾತ್ರ ನನ್ನದಲ್ಲ ಎಂದು ಹೇಳಿದ್ದಾರೆ. ರಜನಿ ಮಕ್ಕಳ್ ಮಂಡ್ರಮ್ ಸದಸ್ಯರೊಂದಿಗೆ ಚರ್ಚಿಸಿ ನಂತರ ರಾಜಕೀಯ ಪಕ್ಷ ಸ್ಥಾಪನೆಗೆ ಸಂಬಂಧಿಸಿದಂತೆ ಅಧಿಕೃತ ಘೋಷಣೆ ಮಾಡುತ್ತೇನೆ ಎಂದು ತಲೈವಾ ತಿಳಿದ್ದಾರೆ.
ರಜನಿ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿ ದಿ. ಎಂ.ಜಿ.ರಾಮಚಂದ್ರನ್ ಅವರೊಂದಿಗೆ ಹೋಲಿಸಿ ಅವರ ಅಭಿಮಾನಿಗಳು ಟ್ವೀಟ್ ಮಾಡುತ್ತಲೇ ಇದ್ದಾರೆ. ಸತ್ಯವೋ ಸುಳ್ಳೋ ಇದನ್ನು ಇದನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಎಂಜಿಆರ್ ಅಮೆರಿಕದ ಆಸ್ಪತ್ರೆಯೊಂದರಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಧಿಕಾರವನ್ನು ಉಳಿಸಿಕೊಂಡರು. ಅದೇ ರೀತಿ ರಜನಿಕಾಂತ್ ಕೂಡ ಕೊರೊನಾ ಗೆದ್ದು ಬರಲಿದ್ದಾರೆ ಎಂದು ಅಭಿಮಾನಿ ಭರವಸೆ ವ್ಯಕ್ತಪಡಿಸಿದ್ದಾರೆ.