ಜೈಪುರ : ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಬಂಡಾಯ ಶಮನ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಸರ್ಕಾರದ ಪರ ಇರುವ ಶಾಸಕರನ್ನು ಜೈಪುರ ಬಳಿಯ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ.
ಪಕ್ಷದ ವಿರುದ್ಧ ಬಹಿರಂಗ ಬಂಡಾಯ ಎದ್ದು ಉಚ್ಚಾಟನೆಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಜೊತೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮಂಗಳವಾರ ನಡೆದ ಎರಡನೇ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್ ಸೇರಿದಂತೆ 18 ಶಾಸಕರು ಗೈರು ಹಾಜರಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿದೆ. ಸೋಮವಾರ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಮೊದಲ ಸಭೆಯಲ್ಲಿ 107 ಶಾಸಕರಿಗೆ ವಿಪ್ ಜಾರಿ ಮಾಡಿ ಎರಡನೇ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಮತ್ತು 15 ಪಕ್ಷೇತರ ಶಾಸಕರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಎರಡನೇ ಸಿಎಲ್ಪಿ ಸಭೆ ಮುಗಿಯುತ್ತಿದ್ದಂತೆ, ಶಾಸಕರನ್ನು ಬಸ್ ಮೂಲಕ ಜೈಪುರ ಹೊರವಲಯದಲ್ಲಿರುವ ಫೇರ್‌ಮಾಂಟ್ ಹೋಟೆಲ್‌ಗೆ ಶಿಫ್ಟ್ ಮಾಡಲಾಗಿದೆ.