ಜೈಪುರ (ರಾಜಸ್ಥಾನ):ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಈ ನಡುವೆ ಜೈಪುರ - ದೆಹಲಿ ಹೆದ್ದಾರಿಯ ಹೋಟೆಲ್‌ವೊಂದರಲ್ಲಿ ತಂಗಿದ್ದ ಅಶೋಕ್ ಗೆಹ್ಲೋಟ್ ಬೆಂಬಲಿತ ಶಾಸಕರನ್ನು ಜೈಸಲ್ಮೇರ್‌ಗೆ ಸ್ಥಳಾಂತರಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಶಾಸಕರನ್ನು ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಸಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜಕೀಯ ಬಿಕ್ಕಟ್ಟು ಪ್ರಚೋದಿಸಲು ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಮತ್ತು ಇತರ 18 ಕಾಂಗ್ರೆಸ್ ಶಾಸಕರು ದಂಗೆ ಎದ್ದ ನಂತರ ಜುಲೈ 13ರಿಂದ ಕಾಂಗ್ರೆಸ್ ಶಾಸಕರು ಹೋಟೆಲ್‌ನಲ್ಲಿ ತಂಗಿದ್ದಾರೆ. ಶಾಸಕರನ್ನು ಸ್ಥಳಾಂತರಿಸಲು ಕಾರಣಗಳು ತಿಳಿದು ಬಂದಿಲ್ಲ.
ಮುಂದಿನ ಹದಿನೈದು ದಿನದ ಬಳಿಕ ವಿಧಾನಸಭೆ ಅಧಿವೇಶನ ನಡೆಯಲಿದೆ. ಆ ವೇಳೆ ವಿಶ್ವಾಸ ಮತಯಾಚನೆ ನಡೆಯಲಿದ್ದು, ಅಧಿವೇಶನಕ್ಕೆ ಮುಂಚಿತವಾಗಿ ಶಾಸಕರನ್ನು ಖರೀದಿಸಲು ಎರಡು ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ತನ್ನ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಸಿಎಂ ಅಶೋಕ್ ಗೆಹ್ಲೋಟ್ ಕಸರತ್ತು ನಡೆಸಿದ್ದಾರೆ. ಈ ನಡುವೆ ಮಾತನಾಡಿರುವ ಸಿಎಂ ಹಣ ಸ್ವೀಕರಿಸದೇ ಎಲ್ಲ ಶಾಸಕರು ಪಕ್ಷಕ್ಕೆ ಮರಳಬೇಕು ಎಂದು ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.