ಜೈಪುರ: ರಾಜಸ್ಥಾನದಲ್ಲಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಅಶೋಕ್ ಗೆಹ್ಲೋಟ್ ಹರಸಾಹಸ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕರನ್ನ ಜೈಪುರದ ಬಳಿಯ ರೆಸಾರ್ಟ್ನಲ್ಲಿ ಹಿಡಿದಿಡಲಾಗಿದೆ. ಮತ್ತೊಂದು ಕಡೆ ಬಂಡಾಯ ಎದ್ದಿರುವ ಸಚಿನ್ ಪೈಲಟ್ ಮನವೊಲಿಸಲು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಿರಿಯ ನಾಯಕರು ಸಚಿನ್ ಪೈಲಟ್ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕುಸಿಯುವ ಭಯದಲ್ಲಿ ರಾಜಸ್ಥಾನ ಸರ್ಕಾರ
ನಿನ್ನೆ ಎರಡನೇ ಬಾರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್ ಸೇರಿದಂತೆ 18 ಮಂದಿ ಕಾಂಗ್ರೆಸ್ ಬಂಡಾಯ ಶಾಸಕರು ಗೈರು ಹಾಜರಾಗಿದ್ದರು. ವಿಧಾನಸಭೆಯಲ್ಲಿ 107 ಕಾಂಗ್ರೆಸ್ ಶಾಸಕರಿದ್ದಾರೆ. 15 ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಬಂಡಾಯ ಶಾಸಕರನ್ನ ಹೊರತುಪಡಿಸಿ ಉಳಿದ ಎಲ್ಲ ಶಾಸಕರು, ಪಕ್ಷೇತರರು ನಿನ್ನೆಯ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿ, ಅಶೋಕ್ ಗೆಹ್ಲೋಟ್ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಿಎಂ ಹಾಗೂ ಪಕ್ಷಕ್ಕೆ ಸಭೆ ಅಂಗೀಕಾರ ನೀಡಿ, ನಿರ್ಣಯ ಕೈಗೊಂಡಿದೆ. ಸಭೆಯಲ್ಲಿ ಪಕ್ಷದ ಅಧ್ಯಕ್ಷರಾಗಿರುವ ಸಚಿನ್ ಪೈಲಟ್ ಅವರ ಹೆಸರನ್ನು ಪ್ರಸ್ತಾಪಿಸದಿರುವುದು ಕಂಡು ಬಂತು. ಎರಡನೇ ಸಭೆ ಬಳಿಕವೂ ಎಐಸಿಸಿ ವಕ್ತಾರ ರಂದೀಪ್ ಸುರ್ಜೆವಾಲಾ, ಬಂಡಾಯ ಎದ್ದಿರುವ ಶಾಸಕರು ಸಭೆಗೆ ಹಾಜರಾಗಲು ಈಗಲೂ ಬಾಗಿಲು ತೆರೆದಿದೆ ಎಂದು ಆಹ್ವಾನ ನೀಡಿದರು.
ಮಾತುಕತೆಗೆ ಪಕ್ಷ ಸಿದ್ಧ ಇದೆ. ಸಚಿನ್ ಸೇರಿದಂತೆ ಎಲ್ಲ ಶಾಸಕರು ತಮ್ಮ ಅಹವಾಲನ್ನು ಪಕ್ಷದ ಮುಂದಿಟ್ಟು ಪರಿಹಾರ ಕಂಡುಕೊಳ್ಳಬಹುದು ಎಂದು ಸುರ್ಜೆವಾಲಾ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಇದ್ಯಾವುದಕ್ಕೂ ಬಗ್ಗದಿದ್ದರೆ ಶಿಸ್ತುಕ್ರಮ ಅನಿವಾರ್ಯ ಎಂದು ಎಚ್ಚರಿಕೆಯನ್ನೂ ರವಾನಿಸಿದರು.
ಮುಂದುವರಿದ ಸಂಧಾನ:
ಒಂದು ಕಡೆ ಶಿಸ್ತುಕ್ರಮದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದು ಕಡೆ ಸಚಿನ್ ಪೈಲಟ್ ಜತೆ ಕೇಂದ್ರ ನಾಯಕರು ನಿರಂತರ ಸಂಧಾನ ಮಾತುಕತೆ ಮುಂದುವರಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲದೇ, ಅಹ್ಮದ್ ಪಟೇಲ್, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪೈಲಟ್ ಅವರೊಂದಿಗೆ ಮಾತನಾಡಿದ್ದಾರೆಂದು ತಿಳಿದುಬಂದಿದೆ.