ಜೈಪುರ:ಶಾಸಕರಿಗೆ ಆಮಿಷವೊಡ್ಡುವ ಮೂಲಕ ರಾಜ್ಯದ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ರಾಜಸ್ಥಾನದ 24 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರಾತ್ರೋರಾತ್ರಿ ಜಂಟಿ ಹೇಳಿಕೆ ಹೊರಡಿಸಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಮಹೇಶ್ ಜೋಶಿ ಮತ್ತು ಮಹೇಂದ್ರ ಚೌಧರಿ ಸಹಿ ಇರುವ 24 ಕೈ ಶಾಸಕರ ಪರವಾಗಿ ಜಂಟಿ ಹೇಳಿಕೆಯನ್ನು ಹೊರಡಿಸಲಾಗಿದೆ. ಇದರಲ್ಲಿ ಯಾರನ್ನೂ ಹೆಸರಿಸದೆ, ಕಾಂಗ್ರೆಸ್ ಅನ್ನು ದಾರಿ ತಪ್ಪಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಮತ್ತು ಪಕ್ಷದ ಶಾಸಕರನ್ನು ಸಂಪರ್ಕಿಸಿ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನವನ್ನು ಕಾಂಗ್ರೆಸ್ ಶಾಸಕರು ಯಶಸ್ವಿಯಾಗಲು ಬಿಡುವುದಿಲ್ಲ. ಗೆಹ್ಲೋಟ್ ಸರ್ಕಾರ ಐದು ವರ್ಷಗಳ ಅವಧಿ ಪೂರೈಸುತ್ತದೆ ಎಂದೂ ಉಲ್ಲೇಖಿಸಲಾಗಿದೆ.