ಜೈಪುರ: ಮದುವೆಗೆ 100 ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಿದರೆ ವಿಧಿಸುತ್ತಿದ್ದ ದಂಡವನ್ನು 10,000 ರೂ.ಗಳಿಂದ 25 ಸಾವಿರ ರೂ.ಗೆ ಹೆಚ್ಚಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ತಡೆಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಲು ಸಭೆ ನಡೆಸಿದ ಅವರು, ರಾತ್ರಿ ಕರ್ಫ್ಯೂ ಕುರಿತು ಸಮಾಲೋಚನೆ ನಡೆಸಿದರು. ವಿವಾಹ ಸಮಾರಂಭದಲ್ಲಿ 100 ಕ್ಕೂ ಹೆಚ್ಚು ಜನರಿಗೆ ಅನುಮತಿ ಇಲ್ಲ. 100 ಕ್ಕಿಂತ ಹೆಚ್ಚು ಜನರನ್ನು ಕರೆದರೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು 10,000 ರೂ.ಗಳಿಂದ 25 ಸಾವಿರ ರೂ.ಗೆ ಹೆಚ್ಚಿಸುವುದಾಗಿ ಹೇಳಿದ್ದಾರೆ.
ರಾಜ್ಯದ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸದವರಿಗೆ ವಿಧಿಸುತ್ತಿದ್ದ ದಂಡವನ್ನು 200 ರೂ.ನಿಂದ 500 ರೂ.ಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಜೈಪುರ, ಜೋಧ್‌ಪುರ, ಬಿಕಾನೆರ್, ಕೋಟಾ, ಅಲ್ವಾರ್, ಉದಯಪುರ, ಅಲ್ವಾರ್ ಮತ್ತು ಅಜ್ಮೀರ್‌ಗಳಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದೆ. ಜನರ ಪ್ರಾಣ ಉಳಿಸುವುದು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.