ಪ್ರಧಾನಿ ನರೇಂದ್ರ ಮೋದಿ ಅವರು 5 ದಿನಗಳ ಕಾಲ ನಡೆಯುತ್ತಿರುವ ಆರ್ಎಐಎಸ್ಇ-2020 (ರೈಸ್ 2020) ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಶೃಂಗಸಭೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, "ಈ ವಿಭಾಗದಲ್ಲಿ ಭಾರತವನ್ನು ವಿಶ್ವದ ಪ್ರಮುಖ ತಾಣವನ್ನಾಗಿ ಮಾಡಲು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಅನ್ನು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಿಕೆಗೆ ಸರಿಯಾಗಿ ಬಳಕೆ ಮಾಡಲಾಗುವುದು" ಎಂದರು.
"ಇತಿಹಾಸದ ಪ್ರತಿಯೊಂದು ಹಂತದಲ್ಲೂ ಭಾರತವು ಜ್ಞಾನ ಮತ್ತು ಕಲಿಕೆಯಲ್ಲಿ ಜಗತ್ತನ್ನು ಮುನ್ನಡೆಸಿದೆ. ಇಂದಿನ ಐಟಿ ಯುಗದಲ್ಲೂ ಭಾರತವು ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಿದೆ. ಭಾರತವನ್ನು ಎಐ ವಿಶ್ವದ ಕೇಂದ್ರವನ್ನಾಗಿ ಮಾಡುವ ಬದ್ಧತೆಯನ್ನು ಹೊಂದಿದೆ" ಎಂದು ಹೇಳಿದರು.
"ಭಾರತವು ಜಾಗತಿಕ ಐಟಿ ಸೇವೆಗಳ ಉದ್ಯಮದ ಶಕ್ತಿ ಕೇಂದ್ರವೆಂದು ಸಾಬೀತಾಗಿದೆ. ನಾವು ಡಿಜಿಟಲ್ ಮಟ್ಟದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುತ್ತೇವೆ. ಭಾರತವು ಎಐಗೆ ಜಾಗತಿಕ ಕೇಂದ್ರವಾಗಬೇಕೆಂದು ನಾವು ಬಯಸುತ್ತೇವೆ. ಅನೇಕ ಭಾರತೀಯರು ಈಗಾಗಲೇ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ವಿಧಾನವು ತಂಡದ ಕೆಲಸ, ವಿಶ್ವಾಸ, ಸಹಯೋಗ, ಜವಾಬ್ದಾರಿ ಮತ್ತು ಒಳಗೊಳ್ಳುವಿಕೆಯ ಪ್ರಮುಖ ತತ್ವಗಳಿಂದ ನಿಯಂತ್ರಿಸಲ್ಪಡುತ್ತದೆ ”ಎಂದು ಮೋದಿ ಹೇಳಿದರು.
ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದು, "ದೇಶದ ಎಐ ಪರಿಸರ ವ್ಯವಸ್ಥೆಯನ್ನು ಮುಂದೆ ಕೊಂಡೊಯ್ಯಲು, ನುರಿತ ವೃತ್ತಿಪರರನ್ನು ಉತ್ತೇಜಿಸುವಲ್ಲಿ ಭಾರತದ ಜನಸಂಖ್ಯಾ ಲಾಭಾಂಶದ ಸಂಪನ್ಮೂಲ ಪ್ರಮುಖ ಪಾತ್ರ ವಹಿಸುತ್ತದೆ" ಎಂದಿದ್ದಾರೆ.
ಸ್ವತಂತ್ರ ಅಧ್ಯಯನಗಳ ಪ್ರಕಾರ, ಭಾರತದ ವಾರ್ಷಿಕ ಬೆಳವಣಿಗೆಯ ದರವನ್ನು 1.3% ಹೆಚ್ಚಿಸುವ ಮತ್ತು 2035ರ ವೇಳೆಗೆ ದೇಶದ ಆರ್ಥಿಕತೆಗೆ 957 ಶತಕೋಟಿ ಡಾಲರ್‌ಗಳನ್ನು ಸೇರಿಸುವ ಸಾಮರ್ಥ್ಯವನ್ನು ಎಐ ಹೊಂದಿದೆ.