ನವದೆಹಲಿ:ವಲಸಿಗರನ್ನು ತಮ್ಮ ತಮ್ಮ ಊರುಗಳಿಗೆ ಕರೆದೊಯ್ಯುತ್ತಿರುವ ಶ್ರಮಿಕ್ ವಿಶೇಷ ರೈಲುಗಳಲ್ಲಿ, ರಾಜ್ಯ ಸರ್ಕಾರಗಳಿಗೆ ಪ್ರಮಾಣಿತ ಶುಲ್ಕ(standard fare)ವನ್ನು ಮಾತ್ರ ವಿಧಿಸುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ. ಇದು ರೈಲ್ವೆ ಇಲಾಖೆಗೆ ಆಗುವ ಒಟ್ಟು ವೆಚ್ಚದ ಕೇವಲ ಶೇ. 15ರಷ್ಟು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿದೆ.
ರೈಲ್ವೆ ಇಲಾಖೆಯು ವಲಸಿಗರಿಗೆ ಯಾವುದೇ ಟಿಕೆಟ್ಗಳನ್ನು ಮಾರಾಟ ಮಾಡುತ್ತಿಲ್ಲ. ರಾಜ್ಯ ಸರ್ಕಾರಗಳು ಒದಗಿಸಿದ ಪಟ್ಟಿಯ ಆಧಾರದ ಮೇಲೆ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯುತ್ತಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿದೆ.
ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಶ್ರಮಿಕ್ ವಿಶೇಷ ರೈಲುಗಳ ಪ್ರತಿ ಕೋಚ್‌ನಲ್ಲಿ ಮಲಗುವ ಸೀಟ್(ಬರ್ತ್) ಖಾಲಿ ಇಡುತ್ತಿದೆ. ಅಲ್ಲದೆ ಪ್ರಯಾಣಿಕರನ್ನು ಬಿಟ್ಟು ಮರಳುವಾಗ ರೈಲು ಖಾಲಿಯಾಗಿ ಮರಳುತ್ತವೆ. ರೈಲಿನಲ್ಲಿ ವಲಸಿಗರಿಗೆ ಉಚಿತ ಆಹಾರ ಮತ್ತು ಒಂದು ಬಾಟಲ್ ನೀರನ್ನು ಸಹ ಒದಗಿಸಲಾಗುತ್ತದೆ.
ರೈಲ್ವೆ ಇಲಾಖೆಯು ಈವರೆಗೆ ದೇಶದ ವಿವಿಧ ಭಾಗಗಳಿಂದ ಇಲ್ಲಿಯವರೆಗೆ 34 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲೂ ವಿಶೇಷವಾಗಿ ಬಡವರ ಸುರಕ್ಷತೆ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಸಾಮಾಜಿಕ ಜವಾಬ್ದಾರಿಯನ್ನು ಇಲಾಖೆ ಪಾಲಿಸುತ್ತಿದೆ ಎಂದು ಮೂಲಗಳು ತಿಳಿಸಿದೆ.
ಲಾಕ್ಡೌನ್ನಿಂದಾಗಿ ದೇಶದ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳನ್ನು ಸಾಗಿಸಲು ಇಲಾಖೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.