ನವದೆಹಲಿ : ಕಳೆದ 15 ದಿನಗಳಲ್ಲಿ ಭಾರತೀಯ ರೈಲ್ವೆಯ 1,150 ಶ್ರಮಿಕ್ ವಿಶೇಷ ರೈಲುಗಳು 15 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಿವೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೇ.15ರ ಮಧ್ಯರಾತ್ರಿವರೆಗೆ ದೇಶದಾದ್ಯಂತ ಒಟ್ಟು 1,150 ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ. ಇದರ ಮೂಲಕ 1.4 ದಶ ಲಕ್ಷಕ್ಕೂ ಹೆಚ್ಚು ಜನರು ತಮ್ಮ ತವರು ಸೇರಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರತಿ ದಿನ 2 ಲಕ್ಷಕ್ಕೂ ಅಧಿಕ ಜನರನ್ನು ಸಾಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮೂರು ಲಕ್ಷ ಆಗುವ ಸಾಧ್ಯತೆಯಿದೆ ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳಾದ ಆಂಧ್ರಪ್ರದೇಶ, ದೆಹಲಿ, ಗುಜರಾತ್, ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ, ಗೋವಾ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಿಂದ ವಿಶೇಷ ರೈಲುಗಳು ಸಂಚರಿಸುತ್ತಿವೆ. ಇದು ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಯಾತ್ರಾರ್ಥಿಗಳಿಗೆ ಊರು ತಲುಪಲು ಸಹಾಯಕವಾಗಿದೆ ಎಂದರು.
ಕೊರೊನಾ ವೈರಸ್ ಭೀತಿ ಹಿನ್ನೆಲೆ ಕಳೆದ ಮಾರ್ಚ್ 25 ರಿಂದ ದೇಶದಾದ್ಯಂತ ಪ್ರಯಾಣಿಕರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮೇ 1 ರಿಂದ ವಿಶೇಷ ಶ್ರಮಿಕ್ ರೈಲು ಸಂಚಾರವನ್ನು ಪ್ರಾರಂಭಿಸಲಾಗಿತ್ತು. ಬಳಿಕ ಮೇ 12 ರಂದು 15 ಜೋಡಿ ರಾಜಧಾನಿ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಪುನರಾರಂಭಿಸಿತ್ತು.