ನವದೆಹಲಿ: ಭಾರತೀಯ ರೈಲ್ವೇ ಇಲಾಖೆ ದಕ್ಷಿಣ ವಿಭಾಗದಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಸಹಾಯಕ, ಡಾಟಾ ಎಂಟ್ರಿ ಆಪರೇಟರ್ ಹಾಗೂ ಡಿಜಿಟಲ್ ಆಫೀಸ್ ಸಹಾಯಕ ಹುದ್ದೆಗೆ ಖಾಯಂ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ.
ಭಾರತೀಯ ರೈಲ್ವೇಯ ದಕ್ಷಿಣ ವಿಭಾಗವು ನೇಮಕಾತಿಯ ಕುರಿತು ಅಧಿಸೂಚನೆ ಹೊರಡಿಸಿದೆ. ಒಟ್ಟು 95 ಸ್ಥಾನಗಳಿಗೆ ಆಹ್ವಾನಿಸಿದ್ದು, ಅರ್ಜಿದಾರರು ಆನ್ಲೈನ್ ಮುಖಾಂತರ ಕೋರಿಕೆ ಸಲ್ಲಿಸಬಹುದು. ಅಂಚೆ ಮೂಲಕ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಜೂನ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಅರ್ಹತೆ ಏನು?
ಮೇಲೆ ಸೂಚಿಸಿದ ಮೂರು ಹುದ್ದೆಗಳಿಗೆ ಅರ್ಜಿದಾರರು 18-28 ವಯಸ್ಸಿನಲ್ಲಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿಗೆ 2 ವರ್ಷ ವಿನಾಯಿತಿ ನೀಡಲಾಗಿದೆ. ವಿಶೇಷಚೇತನರಿಗೆ 10 ವರ್ಷ ರಿಯಾಯಿತಿ ಇದೆ ಎಂದು ಹೇಳಿದೆ.
ಅರ್ಜಿ ಸಲ್ಲಿಕೆಯ ಶುಲ್ಕ:
ಅರ್ಜಿದಾರರ ಬಿಸಿಎ/ಕಂಪ್ಯೂಟರ್ ವಿಜ್ಞಾನದಲ್ಲಿ ಬಿಎಸ್ಸಿ ಅಥವಾ ಐಟಿ ಪದವಿ ಅಥವಾ ತತ್ಸಮಾನ ಯಾವುದೇ ಪದವಿ ಮುಗಿಸಿದವರು ಹಾಗೂ ಎಂಎಸ್ ಆಫಿಸ್ 2010 ಅಥವಾ ನೂತನ ವರ್ಶನ್ನಲ್ಲಿ ಪರಿಣತಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹ 500 ನಿಗದಿಪಡಿಸಲಾಗಿದೆ. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗೆ ಶುಲ್ಕದಲ್ಲಿ ₹ 400 ಮರಳಿಸಲಾಗುತ್ತದೆ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 250 ಅರ್ಜಿ ದರವಿದೆ.
ಮಾಸಿಕ ಸಂಬಳ:
ಇಲಾಖೆ ನಡೆಸಿದ ಎಲ್ಲಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಜಿದಾರರಿಗೆ ಮಾಸಿಕ ಸಂಬಳ, 'ಜಡ್' ಶ್ರೇಣಿ ನಗರದಲ್ಲಿ ನಿಯೋಜನೆಗೊಂಡವರಿಗೆ ₹ 18,500, 'ವೈ' ಶ್ರೇಣಿ ನಗರ- ₹ 20,000 ಹಾಗೂ 'ಎಕ್ಸ್' ಶ್ರೇಣಿ ನಗರ- ₹ 22,000 ನೀಡಲಾಗುವುದು ಎಂದು ಭಾರತೀಯ ರೈಲ್ವೇ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಭಾರತೀಯ ರೈಲ್ವೇಯ ವೆಬ್ಸೈಟ್ಗೆ ಭೇಟಿ ನೀಡಬಹುದು.