ಮುಂಬೈ:ಭಾರತೀಯ ರೈಲ್ವೆಯ ಪಶ್ಚಿಮ ವಲಯ ತನ್ನ ಆರು ವಿಭಾಗಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದೆ. ತನ್ನ ವಿಭಾಗಗಳಾದ ಮುಂಬೈ, ವಡೋದರಾ, ಅಹಮದಾಬಾದ್, ರತ್ನಂ, ರಾಜ್‌ಕೋಟ್ ಮತ್ತು ಭಾವನಗರಗಳ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು 10 ರೂಪಾಯಿಯಿಂದ 50 ರೂಪಾಯಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಪ್ಲಾಟ್ಫಾರ್ಮ್ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದು, ಪ್ಲಾಟ್ಫ್ಲಾರ್ಮ್ ಶುಲ್ಕ ಹೆಚ್ಚಿಸಿದರೆ ಜನಸಂದಣಿ ಕಡಿಮೆ ಆಗುತ್ತದೆ ಎಂಬ ಭರವಸೆಯಲ್ಲಿ ರೈಲ್ವೆ ಇಲಾಖೆ ನಿರ್ಧಾರ ತೆಗೆದುಕೊಂಡಿದೆ.
ರೈಲ್ವೆ ನಿಲ್ದಾಣಕ್ಕೆ ಹೋಗೋಕೆ ಮುನ್ನ ಎಚ್ಚರ: ಕೊರೊನಾ ಎಫೆಕ್ಟ್ನಿಂದ ಹೆಚ್ಚಾಗಿದೆ ಪ್ಲಾಟ್‌ಫಾರ್ಮ್ ಟಿಕೆಟ್ ದರ..!
ಕೊರೊನಾ ಸೋಂಕಿನ ಕಾರಣಕ್ಕೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಎಲ್ಲ ರಾಜ್ಯಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈಗ ಭಾರತೀಯ ರೈಲ್ವೆಯೂ ಕೂಡಾ ಕೊರೊನಾ ಹರಡದಂತೆ ತಡೆಯಲು ಹೊಸ ತಂತ್ರ ಅನುಸರಿಸುತ್ತಿದೆ.
ಪಶ್ಚಿಮ ವಲಯದ ಸುಮಾರು 250 ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಈ ಮೊದಲು ಕೇಂದ್ರ ರೈಲ್ವೆ ವ್ಯಾಪ್ತಿಗೆ ಬರುವ ಕೆಲವು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ಹೆಚ್ಚಿಸಲಾಗಿತ್ತು. ಈಗ ಪಶ್ಚಿಮ ರೈಲ್ವೆಯೂ ಪ್ಲಾಟ್‌ಫಾರ್ಮ್ ಶುಲ್ಕ ಪರಿಷ್ಕರಿಸಿದೆ.
ಕೊರೊನಾ ಭೀತಿಯಿಂದ ಭಾರತೀಯ ರೈಲ್ವೆ ಕೂಡಾ ತನ್ನದೇ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗಷ್ಟೇ ಎಸಿ ಬೋಗಿಗಳಲ್ಲಿ ಕಿಟಕಿಯ ಪರದೆಗಳನ್ನು ತೆಗೆದುಹಾಕಬೇಕು ಎಂದು ರೈಲ್ವೆ ಮಂಡಳಿ ಸೂಚಿಸಿತ್ತು. ಕೆಲವು ಸಾರ್ವಜನಿಕ ವಲಯದ ಉದ್ದಿಮೆಗಳೂ ತಮ್ಮದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈಗ ಪಶ್ಚಿಮ ರೈಲ್ವೆ ವಲಯ ಪ್ಲಾಟ್‌ಫಾರ್ಮ್ ದರ ಪರಿಷ್ಕರಣೆ ಮಾಡಿದ್ದು ಕೊರೊನಾ ಭೀತಿ ಕಡಿಮೆಯಾದ ನಂತರ ಪ್ಲಾಟ್‌ಫಾರ್ಮ್ ದರ ಮಾಮೂಲಿಯಂತೆ ಇರಲಿದೆಯಾ? ಅನ್ನೋದನ್ನು ಕಾದುನೋಡಬೇಕಿದೆ.