ರಾಯಗಢ:ಮಹಾರಾಷ್ಟ್ರದ ರಾಯಗಢದಲ್ಲಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಇನ್ನೂ ಓರ್ವ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ಹೇಳಲಾಗಿದೆ.
ರಾಯಗಢ ಕಟ್ಟಡ ಕುಸಿತ ಪ್ರಕರಣ: ಮೃತರ ಸಂಖ್ಯೆ 14ಕ್ಕೆ ಏರಿಕೆ, ಓರ್ವ ನಾಪತ್ತೆ
ಸೋಮವಾರ ಸಂಜೆ ರಾಯಗಢ ಜಿಲ್ಲೆಯ ಮಹಾದ್ ಪ್ರದೇಶದಲ್ಲಿರುವ ಐದು ಅಂತಸ್ತಿನ ಹಳೆಯ ಕಟ್ಟಡ ಕುಸಿದಿದ್ದು, ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಕುಸಿದಿರುವ ಐದು ಅಂತಸ್ತಿನ ಕಟ್ಟಡದ ಅವಶೇಷಗಳಿಂದ ನಾಲ್ಕು ವರ್ಷದ ಬಾಲಕ ಮತ್ತು 60 ವರ್ಷದ ಮಹಿಳೆಯನ್ನು ಮಂಗಳವಾರ ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ರಕ್ಷಿಸಿದ ಹುಡುಗನ 30 ವರ್ಷದ ತಾಯಿ ಮತ್ತು ಏಳು ವರ್ಷದ ಇಬ್ಬರು ಸಹೋದರಿಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಕಟ್ಟಡ ಬೀಳುತ್ತಿರುವಾಗ ಅದರ ಕಲ್ಲೊಂದು ತಗುಲಿ ವ್ಯಕ್ತಿಯೋರ್ವ ಹೃದಯಸ್ತಂಭನದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಪೈಕಿ ಐವರು ಪುರುಷರು ಮತ್ತು ಐವರು ಮಹಿಳೆಯರು ಹಾಗು ಇಬ್ಬರು ಬಾಲಕಿಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ ಒಂಭತ್ತು ಜನರನ್ನು ರಕ್ಷಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸಂಜೆ ರಾಯಗಢ ಜಿಲ್ಲೆಯ ಮಹಾದ್ ಪ್ರದೇಶದಲ್ಲಿರುವ ಐದು ಅಂತಸ್ತಿನ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿತ್ತು. ಘಟನೆ ಸಂಬಂಧ ಬಿಲ್ಡರ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.