ಕರ್ನಾಟಕ

karnataka

By

Published : Aug 19, 2020, 3:03 PM IST

ETV Bharat / bharat

2 ಕೋಟಿ ಉದ್ಯೋಗ ನಷ್ಟವಾಗಿದೆ, ಬಿಜೆಪಿ ಈ ಕುರಿತ ಸತ್ಯ ಮರೆಮಾಚುತ್ತಿದೆ: ರಾಹುಲ್ ಗಾಂಧಿ

ಕೊರೊನಾ ವೈರಸ್​ ತಂದೊಡ್ಡಿದ ಸಂಕಷ್ಟದಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ದೇಶದಲ್ಲಿನ 2 ಕೋಟಿ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಗಮನ ಹರಿಸದೆ ದೇಶದ ಜನತೆಯಲ್ಲಿ ಸ್ವದೇಶಿ ಮನೋಭಾವನೆ ಬೀರುವಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್​​ ಮುಖಂಡ ರಾಹುಲ್​ ಗಾಂಧಿ ಟೀಕಿಸಿದ್ದಾರೆ.

Rahul
ರಾಗಾ ಕಿಡಿ

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮಧ್ಯೆ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಎರಡು ಕೋಟಿ ಜನರು ತಮ್ಮ ಉದ್ಯೋಗ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ನಿರುದ್ಯೋಗದ ಸತ್ಯವನ್ನು ದೇಶದಿಂದ ಮರೆಮಾಚಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ ರಾಹುಲ್‌, ಕಳೆದ 4 ತಿಂಗಳಲ್ಲಿ ಸುಮಾರು 2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗವನ್ನೇ ಆಶ್ರಯಿಸಿದ್ದ ಈ ಕುಟುಂಬಗಳ ಜೀವನ ಇದೀಗ ಕತ್ತಲೆಯಲ್ಲಿ ಕಳೆಯುವಂತಾಗಿದೆ. ನಿರುದ್ಯೋಗ ಮತ್ತು ಆರ್ಥಿಕ ಕುಸಿತದ ಬಗ್ಗೆ ಸತ್ಯ ಮರೆಮಾಚುವ ಸಲುವಾಗಿ ಬಿಜೆಪಿ ಫೇಸ್‌ಬುಕ್‌ನಲ್ಲಿ ನಕಲಿ ಸುದ್ದಿಗಳು ಹಾಗೂ ದ್ವೇಷದ ಪೋಸ್ಟ್​​ಗಳನ್ನು ಹಾಕಿ ಜನತೆಯಿಂದ ಈ ವಿಷಯ ಮುಚ್ಚಿಡುತ್ತಿದೆ ಎಂದಿದ್ದಾರೆ.

ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಪ್ರಕಟಿಸಿದ ಸುದ್ದಿಯ ಆಧಾರದ ಮೇಲೆ ರಾಗಾ ಈ ಹೇಳಿಕೆ ನೀಡಿದ್ದು, ಏಪ್ರಿಲ್ ತಿಂಗಳ ನಂತರ ಸುಮಾರು 1.89 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.

ಪಕ್ಷಪಾತ, ನಕಲಿ ಸುದ್ದಿ ಮತ್ತು ದ್ವೇಷದ ಹೇಳಿಕೆಯ ಮೂಲಕ ನಾವು ಕಷ್ಟಪಟ್ಟು ಸಂಪಾದಿಸಿದ ಪ್ರಜಾಪ್ರಭುತ್ವವನ್ನು ಬಿಜೆಪಿ ನಾಶಪಡಿಸುತ್ತಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಟ್ಟುಕೊಡಲು ನಾವು ಸಿದ್ಧರಿಲ್ಲ. ಡಬ್ಲ್ಯುಎಸ್‌ಜೆ ಬಹಿರಂಗಪಡಿಸಿದಂತೆ, ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತಲೆದೂರಿದ್ದು, ಈ ವಿಷಯವನ್ನು ಮರೆಮಾಚುವ ಸಲುವಾಗಿ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಸುದ್ದಿ ಬಿತ್ತರಿಸುವ ಮೂಲಕ ನಿರುದ್ಯೋಗ ಸಮಸ್ಯೆಯ ಸತ್ಯವನ್ನು ಮುಚ್ಚಿಡುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ರಾಹುಲ್​ ಗಾಂಧಿ ಹೇಳಿಕೆಗೆ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದು, ರಾಜಕೀಯ ನೆಲೆ ಯಾವುದರಿಂದ ಕುಗ್ಗಿದೆ ಹಾಗೂ ಪ್ರಜಾಪ್ರಭುತ್ವ ಯಾರಿಂದ ಹಾಳಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕಾಂಗ್ರೆಸ್​​ ತನ್ನ ಪ್ರಾಬಲ್ಯ ಸಾಧಿಸಲು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ಕಾಂಗ್ರೆಸ್​​ ಸಿದ್ದಾಂತವನ್ನು ಒಪ್ಪಿದರೆ ಮಾತ್ರ ಪ್ರಜಾಪ್ರಭುತ್ವ ಉಳಿದಂತೆ ಎಂದು ರಾಹುಲ್​ ಗಾಂಧಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಕಾರ ತಮ್ಮ ಇಚ್ಚೆಯಂತೆ ಯಾವುದೇ ಸಂಸ್ಥೆ ಕೆಲಸ ಮಾಡದಿದ್ದರೆ ಅದು ಪ್ರಜಾಪ್ರಭುತ್ವ ವಿರೋಧಿಯಂತೆ ಅವರಿಗೆ ಭಾಸವಾಗುತ್ತದೆ. ಆದ್ದರಿಂದಲೇ ಬಿಜೆಪಿ ಮತ್ತು ಆರ್​​ಎಸ್​​ಎಸ್​​ ಕಾರ್ಯಗಳನ್ನು ರಾಹುಲ್​ ಗಾಂಧಿ ದ್ವೇಷಿಸುತ್ತಾರೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ABOUT THE AUTHOR

...view details