ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ವರಿಷ್ಠ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರ ಇವೆರಡೂ ಪ್ರಸ್ತುತ ಆರ್ಥಿತಕತೆಯ ಚಿಹ್ನೆಯಾಗಿದ್ದು, ನರೇಂದ್ರ ಮೋದಿ, ಬಜೆಟ್ ಮೂಲಕ ಜನ ಸಾಮಾನ್ಯರ ಬದುಕನ್ನೇ ನುಂಗಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಸಮಸ್ಯೆ, ಕುಸಿಯುತ್ತಿರುವ ಆರ್ಥಿಕತೆ, ಏರುತ್ತಿರುವ ತರಕಾರಿ, ಬೇಳೆ ಕಾಳು, ಖಾದ್ಯ ತೈಲದ ಬೆಲೆ ಇವೆಲ್ಲವೂ ಮೋದಿ ಸರ್ಕಾರದ ಸಾಧನೆಯಾಗಿದ್ದು, ಮೋದಿ ಈ ದೇಶದ ಬಡ ಜನರ ಜೀವನವನ್ನೇ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದ್ದು, ತುಕ್ಡೆ-ತುಕ್ಡೆ ಗ್ಯಾಂಗ್ಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ ಎಂದು ದೂಷಿಸಿತ್ತು. ಅದನ್ನೇ ಅಸ್ತ್ರವಾಗಿಸಿದ ರಾಗಾ, ಬಡವರ ಬದುಕು ಕಸಿಯುವವರು ತುಕ್ಡೆ-ತುಕ್ಡೆ ಗ್ಯಾಂಗಿನವರು ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಇನ್ನು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದು, ಬಿಜೆಪಿ ಸರ್ಕಾರ ಬಡವರ ಬದುಕು ಕಸಿದ್ದಿದ್ದಲ್ಲದೆ, ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಆರೋಪಿಸಿದ್ದಾರೆ.
ತರಕಾರಿ ಹಾಗೂ ದೈನಂದಿನ ಬದುಕಿಗೆ ಅವಶ್ಯವಿರುವ ವಸ್ತುಗಳ ಬೆಲೆಯು ಗಗನಕ್ಕೇರಿದೆ. ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳು ಕೈಗೆಟಕದಿದ್ದರೆ, ಬಡವರು ಏನು ತಿಂದು ಬದುಕಲು ಸಾಧ್ಯ ಎಂದು ಪ್ರಶ್ನಿಸಿದ ಪ್ರಿಯಾಂಕಾ, ಟ್ವೀಟ್ ಮಾಡುವ ಮೂಲಕ ಆಡಳಿತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.