ನವದೆಹಲಿ:ಉ.ಪ್ರದೇಶದಲ್ಲಿ ಜಾತಿ ಹಿಂಸಾಚಾರ ಹಾಗೂ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಖಂಡಿಸಿದ್ದಾರೆ.
ಯೋಗಿ ಸರ್ಕಾರದ ಕುಮ್ಮಕ್ಕಿನ ದಾಳಿಯಿಂದ ಅಜಮ್ಗರ್ನ ಬಸ್‌ಗಾಂವ್ ಗ್ರಾಮದ ದಲಿತ ಮುಖ್ಯಸ್ಥನ ಹತ್ಯೆಯ ಬಗ್ಗೆ ಕಿಡಿ ಕಾರಿದ ರಾಹುಲ್, ಉತ್ತರ ಪ್ರದೇಶ ಜಾತಿ ಹಿಂಸೆ ಮತ್ತು ಅತ್ಯಾಚಾರದ "ಜಂಗಲ್ ರಾಜ್" ಸರ್ಕಾರ ಆಗಿದೆ. ಅದರ ಪ್ರಭಾವ ಉತ್ತುಂಗಕ್ಕೇರಿದೆ ಎಂದು ಆರೋಪಿಸಿದ್ದಾರೆ.
ಈಗ ಮತ್ತೊಂದು ಭಯಾನಕ ಘಟನೆ ನಡೆದಿದೆ, ಸರ್ಪಂಚ್ ಸತ್ಯಮೇವ್ ದಲಿತ ಎಂಬ ಕಾರಣಕ್ಕೆ ಅವರು ಗುಂಡಿಕ್ಕಿ ಕೊಲ್ಲಲ್ಪಟ್ಟರು ಎಂದು ಹೇಳಿರುವ ರಾಹುಲ್, ಸತ್ಯಮೇವ್ ಜಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಅಜಮ್‌ಗರ್ ಜಿಲ್ಲೆಯ ತೈವಾನ್ ಪ್ರದೇಶದ ದಲಿತ ಮತ್ತು ಬಾಸ್ಗಾಂವ್ ಗ್ರಾಮದ ಮುಖ್ಯಸ್ಥ ಸತ್ಯಮೇವ್ (42) ಅವರನ್ನು ಕಳೆದ ವಾರ ಗುಂಡಿಕ್ಕಿ ಕೊಲ್ಲಲಾಯಿತು.
ಇನ್ನು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ ಪ್ರಿಯಾಂಕಾ ಗಾಂಧಿ, ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಉತ್ತರ ಪ್ರದೇಶ ಸರ್ಕಾರವನ್ನು ಕಟುವಾಗಿ ಖಂಡಿಸಿದ್ದಾರೆ.
ಬುಲಂದ್‌ಶಹರ್, ಹಾಪುರ್ ಹಾಗೂ ಲಖಿಂಪುರ್ ಖೀರಿಯಲ್ಲಿ ಮಹಿಳೆಯರ ಮೇಲೆ ಹಿಂಸೆ, ಅತ್ಯಾಚಾರದಂತಹ ಘಟನೆ ನಡೆದಿತ್ತು. ಈಗ ಗೋರಖ್ಪುರ್ನಲ್ಲಿ ಅಂತಹ ಘಟನೆ ಮರುಕಳಿಸಿದೆ. ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಇಂತಹ ಪುನರಾವರ್ತಿತ ಘಟನೆಗಳು ಸಾಬೀತುಪಡಿಸುತ್ತಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈ ಪ್ರದೇಶಗಳಲ್ಲಿನ ಮಹಿಳೆಯರ ಮೇಲಿನ ಅಪರಾಧಗಳ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ಉತ್ತರ ಪ್ರದೇಶದ ಅಪರಾಧಿಗಳ ಮನಸ್ಸಿನಲ್ಲಿ ಕಾನೂನಿನ ಬಗ್ಗೆ ಭಯವಿಲ್ಲ, ಇದರ ಪರಿಣಾಮವಾಗಿ ಮಹಿಳೆಯರ ವಿರುದ್ಧ ಇಂತಹ ಭೀಕರ ಘಟನೆಗಳು ನಡೆಯುತ್ತಿವೆ. ಪೊಲೀಸರು ಮತ್ತು ಇಲ್ಲಿನ ಆಡಳಿತವು ಭದ್ರತೆಯನ್ನು ಒದಗಿಸಲು ಹಾಗೂ ಇಂತಹ ಘಟನೆಗಳ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ. ರಾಜ್ಯ ಸರ್ಕಾರವು ಈ ಕುರಿತು ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ಅವರು ಆರೋಪಿಸಿದ್ದಾರೆ.