ದೆಹಲಿ:ದೆಹಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ರಂಗೇರುತ್ತಿರುವ ಅಖಾಡದಲ್ಲಿ ಇಂದು ಕಾಂಗ್ರೆಸ್ನ ನಾಯಕರುಗಳು ಪ್ರಚಾರ ಅಬ್ಬರದಲ್ಲಿ ತೊಡಗಿದ್ದಾರೆ. ಇಂದು ಜಂಗ್ಪುರ ಹಾಗೂ ಸಂಗಮ್ ವಿಹಾರ್ ಪ್ರದೇಶಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಕೈಗೊಳ್ಳಲಿದ್ದಾರೆ.
ಇನ್ನು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಚುನಾವಣಾ ರ್ಯಾಲಿಗೆ ಧುಮುಕಲಿದ್ದಾರೆ. ಅಲ್ಲದೆ ಇವರಿಗೆ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಕೂಡಾ ರಜೌರಿ ಏರಿಯಾದಲ್ಲಿ ಸಾಥ್ ನೀಡಲಿದ್ದಾರೆ.
ಈ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ 15 ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷವು, 2015 ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದೂ ಸ್ಥಾನವನ್ನು ಗೆಲ್ಲಲಾಗದೆ ಸಂಪೂರ್ಣ ನೆಲಕಚ್ಚಿತ್ತು. ಕಳೆದುಕೊಂಡಿದ್ದ ಸ್ಥಾನಗಳನ್ನು ಮತ್ತೆ ಪಡೆಯಲು ಈ ಬಾರಿ ಕಾಂಗ್ರೆಸ್ನ ಉನ್ನತ ಮಟ್ಟದ ನಾಯಕರೇ ಕಣದಲ್ಲಿ ಪ್ರಚಾರಕ್ಕಿಳಿದಿದ್ದಾರೆ.
ಕೆಲ ಮೂಲಗಳ ಪ್ರಕಾರ, ದೆಹಲಿ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷದಲ್ಲಿ ಆಂತರಿಕ ಬಿರುಕು ಉಂಟಾಗಿತ್ತು. ಹಾಗಾಗಿ ಪಕ್ಷದ ಹಿರಿಯ ನಾಯಕರುಗಳು ಚುನಾವಣೆಯಿಂದ ಹಿಮ್ಮುಖರಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳ ಪರಿಚಯವನ್ನೂ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಂತೆಯೇ ಕಾಂಗ್ರೆಸ್ನ ಹಿರಿ ತಲೆಗಳು ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ. ಬಿಜೆಪಿ ಹಾಗೂ ಆಪ್ ವಿರುದ್ಧ ಸೋತಿರುವ ಕೈ ಪಾಳೆಯ ದೆಹಲಿ ನೆಲದಲ್ಲಿ ತನ್ನ ಅಧಿಪತ್ಯ ಸಾಧಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.