ನವದೆಹಲಿ:ಕೊರೊನಾ ಸೋಂಕು ಭಾರತದಲ್ಲಿ ನಿಯಂತ್ರಣದಲ್ಲಿದೆ ಎಂಬ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಹೇಳಿಕೆ ಹೇಗಿದೆ ಎಂದರೆ, ಟೈಟಾನಿಕ್ ಹಡಗು ಮುಳುಗುವುದಿಲ್ಲ ಎಂದು ಅದರ ಕ್ಯಾಪ್ಟನ್ ಪ್ರಯಾಣಿಕರಿಗೆ ಹೇಳಿದಂತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹರ್ಷವರ್ಧನ್ ಭರವಸೆ ನೀಡಿದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಈ ಬಿಕ್ಕಟ್ಟನ್ನು ನಿಭಾಯಿಸಲು ಸಂಪನ್ಮೂಲಗಳ ಬೆಂಬಲದೊಂದಿಗೆ ಕ್ರಿಯಾ ಯೋಜನೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಸಮಯ ಇದಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಟೈಟಾನಿಕ್ ಹಡಗು ಸೌತಾಂಪ್ಟನ್ನಿಂದ ನ್ಯೂಯಾರ್ಕ್ಗೆ ತೆರಳುವ ವೇಳೆ ಏಪ್ರಿಲ್ 15, 1912ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಡೆಯಾಗಿತ್ತು. ಮಂಜುಗಡ್ಡೆಗೆ ಅಪ್ಪಳಿಸಿದ ನಂತರ ಹಡಗು ಮುಳುಗಡೆಯಾಗುವ ಲಕ್ಷಣಗಳು ಗೋಚರಿಸಿದ್ದವು. ಈ ವೇಳೆ ಅದರ ಕ್ಯಾಪ್ಟನ್ ಹಡಗು ಮುಳುಗಡೆಯಾಗೋದಿಲ್ಲ ಎಂದು ಅಲ್ಲಿನ ಪ್ರಯಾಣಿಕರಿಗೆ ಹೇಳಿದ್ದ. ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೂಡಾ ಇದೇ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆಯೂ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಆರ್ಥಿಕ ವಿಚಾರಗಳಿದೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದರು. 'ನಮ್ಮ ಜನ ಹಾಗೂ ನಮ್ಮ ಆರ್ಥಿಕತೆಗೆ' ಕೊರೊನಾ ವೈರಸ್ ಮಾರಕ ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.