ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ವರಿಷ್ಠ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರಿಗೆ ನೀಡಿಲಾಗಿದ್ದ ವಿಶೇಷ ಭದ್ರತಾ ವ್ಯವಸ್ಥೆ (ಎಸ್ಪಿಜಿ) ಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದ ಬೆನ್ನಲ್ಲೇ ರಾಹುಲ್ ಅವರು ಭದ್ರತಾ ಪಡೆಗೆ ತಮ್ಮ ಕೊನೆಯ ಸಂದೇಶ ರವಾನಿಸಿದ್ದಾರೆ.
ವರ್ಷಗಳ ಕಾಲ ನನ್ನನ್ನು ಮತ್ತು ನನ್ನ ಕುಟುಂಬವನ್ನು ರಕ್ಷಿಸಲು ದಣಿವರಿಯದೇ ಶ್ರಮಿಸಿದ ಎಸ್‌ಪಿಜಿಯ ಎಲ್ಲ ಸಹೋದರ ಮತ್ತು ಸಹೋದರಿಯರಿಗೆ ಧನ್ಯವಾದಗಳು. ನಿಮ್ಮ ಸಮರ್ಪಣೆ, ನಿಮ್ಮ ನಿರಂತರ ಬೆಂಬಲ ಮತ್ತು ವಾತ್ಸಲ್ಯ ಮತ್ತು ಕಲಿಕೆಯಿಂದ ತುಂಬಿದ ಪ್ರಯಾಣಕ್ಕೆ ಧನ್ಯವಾದಗಳು. ಇದೊಂದು ಸವಲತ್ತು. ಉತ್ತಮ ಭವಿಷ್ಯಕ್ಕಾಗಿ ನಿಮಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
19984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಹತ್ಯೆ ಮಾಡಿದ ಬಳಿಕ ಅವರ ಗಾಂಧಿ ಕುಟುಂಬ ಹಾಗೂ ಅವರ ನಿಕಟ ವರ್ತಿಗಳಿಗೆ ಎಸ್ಪಿಜಿ ಭದ್ರತೆ ಕೊಡುವ ವ್ಯವಸ್ಥೆ ಜಾರಿಯಾಗಿತ್ತು. ಈ ಬಳಿಕ ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಎಲ್ಟಿಟಿಇ ಆತ್ಮಹತ್ಯೆ ಬಾಂಬ್ ದಾಳಿ ಮೂಲಕ ಹತ್ಯೆಗೈದ ಬಳಿಕ ಭದ್ರತೆಯಲ್ಲಿ ಇನ್ನಷ್ಟು ಬದಲಾವಣೆ ಮಾಡಲಾಯಿತು.
ಇದೀಗ ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್ಪಿಜಿಯನ್ನು ಹಿಂದಕ್ಕೆ ಪಡೆದು ಸಿಆರ್ಪಿಎಫ್ನ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆ ವಾಪಸ್ ಪಡೆಯಲಾಯಿತು.