ತಿರುವನಂತಪುರ: ಕೇರಳದ ವಯನಾಡಿನ ಸಂಸದರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ, ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. ರಾಜ್ಯದಲ್ಲಾದ ರೈತರ ಆತ್ಮಹತ್ಯೆ ಕುರಿತು ತನಿಖೆ ನಡೆಸುವಂತೆ ಸಿಎಂಗೆ ಪತ್ರ ಬರೆದು ತಿಳಿಸಿದ್ದಾರೆ.
ಮೇ 25ರಂದು ವಿ. ದಿನೇಶ್ ಕುಮಾರ್ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಬಾಧೆಯಿಂದ ಈತ ಆತ್ಮಹತ್ಯೆ ಮಾಡಿಕೊಂಡನೆಂದು ಕುಟುಂಬದವರು ತಿಳಿಸಿದ್ದರು. ಇವರಂತೆಯೇ ಹಲವಾರು ರೈತರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗ್ತಿದೆ.
ಕೇರಳ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದ್ದರೂ ಸಹ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ದಿನೇಶ್ ಸಾವು ಹಾಗೂ ಅವರ ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ಸೂಕ್ತ ತನಿಖೆಯಾಗಬೇಕು. ನಮ್ಮ ರೈತರನ್ನು ಸಾಲಮುಕ್ತರನ್ನಾಗಿಸುವುದು ಮುಖ್ಯ. ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನನ್ನ ಸಂಪೂರ್ಣ ಸಹಕಾರವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್ ಅವರು, ರೈತರ ಆತ್ಮಹತ್ಯೆ ಕುರಿತಾಗಿ ರಾಜ್ಯ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಸೂಕ್ತ ಪರಿಹಾರ ದೊರೆಯಬೇಕಿದೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದಿದ್ದಾರೆ. ಅಲ್ಲದೆ, ದಿನೇಶ್ ಆತ್ಮಹತ್ಯೆ ಕುರಿತಾಗಿ ತನಿಖಾ ವರದಿಯನ್ನು ನೀಡುವುದಾಗಿ ಸಹ ಹೇಳಿದ್ದಾರೆ.