ನವದೆಹಲಿ: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯೊಂದಿಗೆ ಕಣಿವೆ ರಾಜ್ಯ ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.
ಹಲವಾರು ವಿಚಾರಗಳಲ್ಲಿ ಕೇಂದ್ರ ಸರ್ಕಾರ ನಡೆಗೆ ನನ್ನ ಸಮ್ಮತಿ ಇಲ್ಲ. ಆದರೆ ಒಂದಷ್ಟು ಸ್ಪಷ್ಟ, ಕಾಶ್ಮೀರ ಭಾರತದ ಆಂತರಿಕ ವಿಚಾರ, ಇದರಲ್ಲಿ ಪಾಕಿಸ್ತಾನ ಆಗಲಿ ಅಥವಾ ಇನ್ಯಾವುದೇ ದೇಶ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ರಾಗಾ ಟ್ವೀಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಇದು ಪ್ರಮುಖ ಉಗ್ರಪೋಷಿತ ರಾಷ್ಟ್ರವಾದ ಪಾಕಿಸ್ತಾನದಿಂದ ಪ್ರಚೋದಿತವಾಗಿದೆ ಮತ್ತು ವಿಶ್ವದ ನಾನಾ ಭಾಗಗಳಲ್ಲಿ ಈ ರಾಷ್ಟ್ರದ ಬೆಂಬಲದ ಮೂಲಕವೇ ನಡೆಯುತ್ತಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
370ನೇ ವಿಧಿ ತೆರವಿನ ವೇಳೆ ಜಮ್ಮು ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದ ಕೇಂದ್ರ ಸರ್ಕಾರ, ಸೇನೆಯ ಬಿಗಿ ಪಹರೆಯಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಇದೇ ಅವಧಿಯಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ರಾಹುಲ್ ಹೇಳಿಕೆ ಆಕ್ಷೇಪಸಿದ್ದ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, ಕಣಿವೆ ರಾಜ್ಯಕ್ಕೆ ಬಂದು ವಾಸ್ತವ ಅರಿತು ಮಾಡನಾಡಲಿ ಎಂದು ತಮ್ಮ ರಾಜ್ಯಕ್ಕೆ ಆಹ್ವಾನ ನೀಡಿದ್ದರು. ಈ ಆಹ್ವಾನ ಒಪ್ಪಿಕೊಂಡು ಕಾಶ್ಮೀರಕ್ಕೆ ತೆರಳಿದ್ದ ರಾಹುಲ್ ಗಾಂಧಿಯನ್ನು ಪೊಲೀಸರು ಭದ್ರತೆಯ ಕಾರಣ ನೀಡಿ ಶ್ರೀನಗರ ಏರ್ಪೋರ್ಟ್ನಿಂದ ಮತ್ತೆ ನವದೆಹಲಿಗೆ ಕಳುಹಿಸಿದ್ದರು.