ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ತವರು ಕ್ಷೇತ್ರ ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಇಂದು ಅಧಿಕೃತವಾಗಿ ಘೋಷಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಂಗ್ರೆಸ್ ನಾಯಕ ಎ.ಕೆ ಆಂಟನಿ, ರಾಹುಲ್ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಅಮೇಥಿಯೊಂದಿಗೆ ಕೇರಳದ ವಯನಾಡಿನಿಂದಲೂ ಅವರು ಸ್ಪರ್ಧಿಸುತ್ತಿದ್ದಾರೆ ಎಂದರು.
ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧೆ ಅಮೇಥಿಯಲ್ಲಿ ರಾಹುಲ್ಗೆ ಸೋಲುವ ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಮೋದಿ ಏಕೆ ಗುಜರಾತ್ ಹಾಗೂ ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ? ಗುಜರಾತ್ನಲ್ಲಿ ಗೆಲ್ಲುವ ವಿಶ್ವಾಸವಿಲ್ಲವೇ? ಇದು ಚಿಕ್ಕ ಮಕ್ಕಳ ಕಾಮೆಂಟ್ನಂತಿದೆ ಎಂದು ಸ್ಮೃತಿ ಇರಾನಿಗೆ ಟಾಂಗ್ ನೀಡಿದರು.
ಉತ್ತರ ಕೇರಳ ಭಾಗದಲ್ಲಿರುವ ವಯನಾಡು ಕಾಂಗ್ರೆಸ್ನ ಭದ್ರಕೋಟೆ. ಎಂಐ ಶನವಾಸ್ ಎಂಬುವರು ಕಳೆದ ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇವರ ನಿಧನದಿಂದ ಸದ್ಯ ಸ್ಥಾನ ತೆರವಾಗಿದೆ.
ರಾಹುಲ್ ಈ ಬಾರಿ ದಕ್ಷಿಣದತ್ತ ಮುಖಮಾಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಕೇರಳದಿಂದ ಅವರು ಸ್ಪರ್ಧಿಸುತ್ತಾರೆ ಎಂದೂ ಹೇಳಲಾಗ್ತಿತ್ತು. ಈ ವೇಳೆ ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ರಾಜ್ಯದ ಕೈ ನಾಯಕರು ರಾಹುಲ್ಗೆ ಮುಕ್ತ ಅವಕಾಶವನ್ನೂ ನೀಡಿದ್ದರು. ಆದರೆ, ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.