ವಯನಾಡ್ (ಕೇರಳ) : ಕೊರೊನಾ ವೈರಸ್ ಹಿನ್ನೆಲೆ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಆನ್ಲೈನ್ ತರಗತಿಗಳ ಸದುಪಯೋಗ ಪಡೆಯಲು ಬುಡಕಟ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ 175 ಸ್ಮಾರ್ಟ್ ಟಿವಿಗಳನ್ನು ಕಲ್ಪೆಟ್ಟ ಪಟ್ಟಣದಲ್ಲಿ ಬುಧವಾರ ಹಸ್ತಾಂತರಿಸಿದರು.
ಕೋವಿಡ್ ಹಿನ್ನೆಲೆ ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದರಿಂದ ರಾಜ್ಯ ಸರ್ಕಾರ ಕೈಟ್ವಿಕ್ಟರ್ಸ್ ಚಾನೆಲ್ ಮತ್ತು ಇತರ ಆನ್ಲೈನ್ ವೇದಿಕೆಗಳ ಮೂಲಕ 'ಫಸ್ಟ್ ಬೆಲ್' ಎಂಬ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದೆ. ಆದರೆ, ವಯನಾಡ್ ಜಿಲ್ಲೆಯ ಕೆಲ ಬುಡಕಟ್ಟು ವಿದ್ಯಾರ್ಥಿಗಳಿಗೆ ಈ ತರಗತಿಗಳು ತಲುಪುತ್ತಿರಲಿಲ್ಲ. ಹೀಗಾಗಿ ಸಂಸದ ರಾಹುಲ್ ಗಾಂಧಿ 175 ಸ್ಮಾರ್ಟ್ ಟಿವಿಗಳನ್ನು ಒದಗಿಸಿದ್ದಾರೆ. ಇದಕ್ಕೂ ಮೊದಲು ತನ್ನ ಜನ್ಮ ದಿನದಂದು ಬುಡಕಟ್ಟು ವಿದ್ಯಾರ್ಥಿಗಳಿಗಾಗಿ 50 ಟಿವಿಗಳನ್ನು ನೀಡಿದ್ದರು.
ಕಲ್ಪೆಟ್ಟದ ಸಂಸದರ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಐ.ಸಿ.ಬಾಲಕೃಷ್ಣನ್ ನೇತೃತ್ವದಲ್ಲಿ ಟಿವಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ವೇಳೆ, ಮಾತನಾಡಿದ ಬಾಲಕೃಷ್ಣನ್, ಜೂನ್ 1 ರಂದು ಸರ್ಕಾರ ಆನ್ಲೈನ್ ತರಗತಿ ಪ್ರಾರಂಭಿಸಿದಾಗ ವಯನಾಡ್ನ ಅನೇಕ ಬುಡಕಟ್ಟು ವಿದ್ಯಾರ್ಥಿಗಳು ಇದರಿಂದ ಹೊರಗುಳಿದಿದ್ದರು, ರಾಹುಲ್ ಗಾಂಧಿ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಮಸ್ಯೆ ಕುರಿತು ರಾಹುಲ್ ಗಾಂಧಿ ವಯನಾಡ್ ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಸೌಲಭ್ಯದ ಅಗತ್ಯವಿರುವ ಬುಡಕಟ್ಟು ವಿದ್ಯಾರ್ಥಿಗಳ ಕುರಿತು ಜಿಲ್ಲಾಧಿಕಾರಿ ಸಂಸದರಿಗೆ ಮಾಹಿತಿ ನೀಡಿದ್ದರು. ಕೇವಲ ವಯನಾಡ್ ಮಾತ್ರವಲ್ಲದೇ, ಕೋಯಿಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲೂ 100 ಹೆಚ್ಚು ಟಿವಿಗಳನ್ನು ರಾಹುಲ್ ಗಾಂಧಿ ವಿತರಿಸಿದ್ದಾರೆ ಎಂದು ಬಾಲಕೃಷ್ಣನ್ ತಿಳಿಸಿದರು.
ಈ ಹಿಂದೆ ಫಸ್ಟ್ ಬೆಲ್ ಕಾರ್ಯಕ್ರಮ ಪ್ರಾರಂಭವಾದಾಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ ಬುಡಕಟ್ಟು ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು.