ದೆಹಲಿ: ಕೊರೊನಾವನ್ನು 21 ದಿನಗಳಲ್ಲೇ ನಿಯಂತ್ರಣ ಮಾಡಬಹುದು ಎಂದು ಮೋದಿ ಅಂದುಕೊಂಡಿದ್ದರು. ಆದರೆ ಈಗ 60 ದಿನಗಳು ಕಳೆದಿವೆ. ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಜಗತ್ತಿನಲ್ಲಿ ಕೊರೊನಾ ಅತ್ಯಧಿಕ ವೇಗದಲ್ಲಿ ಹಬ್ಬುತ್ತಿರುವ ದೇಶಗಳ ಸಾಲಿನಲ್ಲಿ ಭಾರತವೂ ಸೇರಿದೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನೇರವಾಗಿ ಮೋದಿ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಲಾಕ್ಡೌನ್ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಲಾಕ್ಡೌನ್ ಫಲಿತಾಂಶ ಶೂನ್ಯ!
ಕೊರೊನಾ ವೈರಸ್ ಬಹಳ ಶೀಘ್ರಗತಿಯಲ್ಲಿ ಹಬ್ಬುತ್ತಿರುವ ದೇಶದಲ್ಲಿ ಭಾರತವು ಒಂದು. ಪರಿಸ್ಥಿತಿ ಗಂಭೀರವಾಗಿದ್ದರೂ ಕೇಂದ್ರ ಸರ್ಕಾರ ಲಾಕ್ಡೌನ್ ಸಡಿಲಿಸಿ, ಲಾಕ್ಡೌನ್ ವಿಧಿಸಿದ ಉದ್ದೇಶವನ್ನೇ ಮರೆತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೊರೊನಾವನ್ನು 21 ದಿನಗಳಲ್ಲಿ ಹೊಡೆದೋಡಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಮುಂದೆ ಹೇಳಿದ್ದರು. ಲಾಕ್ಡೌನ್ 4.0 ಮುಗಿಯುವ ಹಂತದಲ್ಲಿದೆ. ಆದರೆ ಕೊರೊನಾ ವೈರಸ್ ತನ್ನ ದಾಳಿಯನ್ನು ಮಾತ್ರ ನಡೆಸುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ, ರಾಜ್ಯಗಳ ಬೆನ್ನಿಗೆ ನಿಲ್ಲದಿದ್ದರೆ ಕೊರೊನಾ ವಿರುದ್ಧ ಹೋರಾಡಲು ಅಸಾಧ್ಯ ಎಂದರು.