ನವದೆಹಲಿ: ಎಲ್ಲರ ಬಯಕೆಯಂತೆ ಪಕ್ಷಕ್ಕಾಗಿ ಕೆಲಸ ಮಾಡಲು ಸಿದ್ಧವಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಪಕ್ಷದೊಳಗಿರುವ ಅಸಮಾಧಾನವನ್ನು ಕೊನೆಗೊಳಿಸಲು ಶನಿವಾರ ಸೋನಿಯಾ ಗಾಂಧಿ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ಪ್ರಮುಖ ಸಭೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಒಟ್ಟು 19 ನಾಯಕರು ಉಪಸ್ಥಿತರಿದ್ದರು.
ಕಾಂಗ್ರೆಸ್‌ನಲ್ಲಿ ಸಕ್ರಿಯ ನಾಯಕತ್ವಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದ ಭಿನ್ನಮತೀಯ ನಾಯಕರ ಜೊತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ನಿನ್ನೆ 7 ಗಂಟೆಗಳ ಸುದೀರ್ಘ ಸಭೆ ನಡೆಸಿದರು.
ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ, ಪಕ್ಷವನ್ನು ಶಕ್ತಿಯುತಗೊಳಿಸಲು ಒಟ್ಟಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಒಂದು ಕುಟುಂಬದ ಸದಸ್ಯರಿದ್ದಂತೆ ಎಂದು ಸಭೆಯಲ್ಲಿ ಸೋನಿಯಾ ಹೇಳಿದರು. ಇದಕ್ಕೆ ಭಿನ್ನಮತೀಯ ನಾಯಕರು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದು, ಬೇರು ಮಟ್ಟದಿಂದಲೇ ಪಕ್ಷವನ್ನು ಬಲಪಡಿಸಬೇಕು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಇನ್ನು ಪಕ್ಷದೊಳಗೆ ಉತ್ತಮ ಸಂವಹನ ಅಗತ್ಯ. ಪಕ್ಷದ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಅದನ್ನು ನಾನು ನಿರ್ವಹಿಸುತ್ತೇನೆ, ಎಲ್ಲರು ಬಯಸಿದಂತೆ ಪಕ್ಷಕ್ಕಾಗಿ ನಾವು ಕೆಲಸ ಮಾಡಲು ಸಿದ್ಧ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.