ದೆಹಲಿ:ಉತ್ತರ ಪ್ರದೇಶದ ಹಥ್ರಾಸ್ ಘಟನೆ ಖಂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದು, ‘ಈ ವಿಡಿಯೋ ಸತ್ಯದಿಂದ ದೂರ ಓಡಿ ಹೋಗುವವರಿಗೆ ಅರ್ಪಣೆ ಹಾಗೂ ನಾವು ಬದಲಾದಾಗ ದೇಶವೂ ಬದಲಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಹಥ್ರಾಸ್ನಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ವಿವಿಧ ಸಮುದಾಯಗಳ ಜನರು, ಅಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ವಿವರಿಸಿದ್ದಾರೆ.
ಈ ಮಧ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಅಲಹಾಬಾದ್ ಕೋರ್ಟ್ ಸೋಮವಾರ ಮಧ್ಯಾಹ್ನ 2:15 ಕ್ಕೆ, ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬ, ಯುಪಿ ಗೃಹ ಕಾರ್ಯದರ್ಶಿ, ಡಿಜಿಪಿಯನ್ನ ವಿಚಾರಣೆ ನಡೆಸಿತು. ಮುಂದಿನ ವಿಚಾರಣೆಯನ್ನ ನವೆಂಬರ್ 2, 2020 ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಕೆ. ಶಾಹಿ ತಿಳಿಸಿದರು.
ಸೆಪ್ಟೆಂಬರ್ 14 ರಂದು ನಾಲ್ವರು ಮೇಲ್ಜಾತಿ ಯುವಕರ ತಂಡ, ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಸಂತ್ರಸ್ತೆಯನ್ನ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾತ್ತು. ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು. ಕುಟುಂಬಸ್ಥರ ಅನುಮತಿಯನ್ನೂ ಪಡೆಯದೆ ರಾತ್ರೋರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂಬ ಆರೋಪವೂ ಕೇಳಿ ಬಂದಿತ್ತು.