ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳ ವಿರೋಧದ ನಡುವೆಯೂ ಸಿಪಿಐ, ಸಿಪಿಐ-ಎಂ, ಆರ್ಜೆಡಿ, ಡಿಎಂಕೆ ಸೇರಿದಂತೆ ಒಂಭತ್ತು ವಿರೋಧ ಪಕ್ಷಗಳ ನಾಯಕರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ರೀನಗರಕ್ಕೆ ಹೊರಟಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ್ದ ಸಂವಿಧಾನದ 370ನೇ ವಿಧಿಯನ್ನ ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷ ನಾಯಕರೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಕಣಿವೆ ನಾಡಿನ ವಾಸ್ತವ ಸ್ಥಿತಿಗತಿ ಅರಿಯಲು ಮತ್ತು ಕೈ ನಾಯಕರೊಂದಿಗೆ ಚರ್ಚೆ ನಡೆಸುವ ಸಲುವಾಗಿ ರಾಹುಲ್ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ಆದರೆ, ರಾಹುಲ್ ಭೇಟಿಯನ್ನು ವಿರೋಧಿಸಿರುವ ಕಾಶ್ಮೀರದ ಅಧಿಕಾರಿಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾಶ್ಮೀರಕ್ಕೆ ಭೇಟಿ ನೀಡದಂತೆ ರಾಹುಲ್ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಡಿಯಾಚೆಗಿನ ಭಯೋತ್ಪಾದನೆ, ಉಗ್ರರ ಮತ್ತು ಪ್ರತ್ಯೇಕತಾವಾದಿಗಳ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹೀಗಾಗಿ ಸಾರ್ವಜನಿಕ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಪ್ರಯತ್ನ ನಡೆಯುತ್ತಿರುವಾಗ ರಾಜಕೀಯ ನಾಯಕರು ಅದಕ್ಕೆ ಅಡ್ಡಿ ಪಡಿಸುವ ಕಾರ್ಯ ಮಾಡಬಾರದು ಎಂದು ತಿಳಿಸಿದ್ದಾರೆ.
ಆದರೆ, ಈ ಮನವಿಯನ್ನು ಧಿಕ್ಕರಿಸಿರುವ ಕೈ ನಾಯಕ ರಾಹುಲ್ ಗಾಂಧಿ ಈಗಾಗಲೇ ತಮ್ಮ ನಿವಾಸವನ್ನು ತೊರೆದು ಕಾಶ್ಮೀರದತ್ತ ಪ್ರಯಾಣ ಬೆಳೆಸಿದ್ದಾರೆ.