ನವದೆಹಲಿ: ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ - ಚೀನಾ ಸಂಘರ್ಷ ನಡೆದ ದಿನದಿಂದ ಇಂದಿನವೆರೆಗೂ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂಷಿಸುತ್ತಲೇ ಬಂದಿದ್ದು, ಚೀನಾ ನಮ್ಮ ಗಡಿಯೊಳಗೆ ನುಸುಳಿಲ್ಲ ಎಂಬ ಪಿಎಂ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಲ್ವಾನ್ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಮೊದಲು ಪ್ರಧಾನಿ ಮೋದಿ ಈ ವಿಷಯದಲ್ಲಿ ಮೌನವಹಿಸಿದ್ದನ್ನು ರಾಹುಲ್ ಗಾಂಧಿ ಖಂಡಿಸಿದ್ದರು. ಬಳಿಕ, ಸೈನಿಕರ ಬಲಿದಾನ ತೀವ್ರ ನೋವನ್ನುಂಟು ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ರ ಟ್ವೀಟ್ಗೆ ರಾಗಾ ಪ್ರತಿಕ್ರಿಯೆ ನೀಡಿದ್ದರು. ಇದು ತೀವ್ರ ದುಃಖದ ವಿಷಯವಾಗಿದ್ದರೆ, ಸಂತಾಪ ಸೂಚಿಸಲು ನಿಮಗೆ ಎರಡು ದಿನಗಳು ಏಕೆ ಬೇಕಾಯಿತು? ನಿಮ್ಮ ಟ್ವೀಟ್ನಲ್ಲಿ ಚೀನಾದ ಹೆಸರನ್ನು ಉಲ್ಲೇಖಿಸದೆ ಭಾರತೀಯ ಸೇನೆಯನ್ನು ಅವಮಾನಿಸುತ್ತಿದ್ದೀರಿ? ಎಂದು ರಾಜನಾಥ್ ಸಿಂಗ್ರನ್ನು ಪ್ರಶ್ನಿಸಿದ್ದರು.
"ಇದು ಚೀನಾದ ಪೂರ್ವ ಯೋಜಿತ ದಾಳಿ. ಇದಕ್ಕೆ ಭಾರತೀಯ ಪಡೆಗಳು ತಕ್ಕಶಾಸ್ತಿ ಮಾಡುತ್ತವೆ" ಎಂದು ಗೋವಾದ ಕೇಂದ್ರ ರಕ್ಷಣಾ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಹರಿಹಾಯ್ದ ರಾಹುಲ್, ಗಾಲ್ವಾನ್ನಲ್ಲಿ ನಡೆದ ದಾಳಿ ಪೂರ್ವ ಯೋಜಿತವಾದದ್ದು, ಇದನ್ನು ತಿಳಿದು ಕೂಡ ಭಾರತ ಸರ್ಕಾರ ನಿದ್ರೆಗೆ ಜಾರಿತ್ತು, ಇದಕ್ಕೆ ನಮ್ಮ ಯೋಧರು ಬೆಲೆ ತೆರಬೇಕಾಯಿತು ಎಂಬುದು ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದರು.
"ಚೀನಾ ನಮ್ಮ ಗಡಿಯೊಳಗೆ ನುಸುಳಿಲ್ಲ. ಯಾವುದೇ ಪ್ರದೇಶವನ್ನು ವಶಪಡಿಸಿಕೊಂಡಿಲ್ಲ. ಯಾವುದೇ ಕಾರಣಕ್ಕೂ ನಮ್ಮ ಒಂದಿಂಚು ಜಾಗದ ಮೇಲೆ ಕಣ್ಣು ಹಾಕಲು ಬೇರೆಯವರಿಗೆ ಬಿಡುವುದಿಲ್ಲ" ಎಂದು ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ರಾಗಾ, ಚೀನಾ ನಮ್ಮ ಗಡಿಯೊಳಗೆ ನುಸುಳಿಲ್ಲ ಎಂದಾದರೆ ನಮ್ಮ ಸೈನಿಕರನ್ನು ಏಕೆ ಕೊಲ್ಲಲಾಯಿತು? ಎಲ್ಲಿ ಕೊಲ್ಲಲಾಯಿತು? ಎಂದು ಪ್ರಶ್ನಿಸಿದ್ದಾರೆ.
ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡ ಯೋಧನೊಬ್ಬರ ತಂದೆ ಬಲವಂತ್ ಸಿಂಹ ಮಾಧ್ಯಮವೊಂದರ ಜೊತೆ ಮಾತನಾಡಿದ ವೇಳೆ, ದೂರವಾಣಿ ಕರೆಯಲ್ಲಿ ತಮ್ಮ ಮಗ ಹೇಳಿದ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. "ನನಗೆ ಅಚಾನಕ್ ಆಗಿ ನನ್ನ ಮಗನ ಕರೆ ಬಂತು. ನಾನು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ಗಾಲ್ವಾನ್ ಕಣಿವೆಯಲ್ಲಿ ಇದ್ದಕ್ಕಿದ್ದಂತೆ ಚೀನಾ ಸೈನಿಕರು ನಮ್ಮ ಮೇಲೆ ದಾಳಿ ಮಾಡಿದರು. ನಾವು 300 - 400 ಮಂದಿ, ಚೀನಾದವರು 2000 - 2500 ಮಂದಿ ಇದ್ದರು. ಅವರ ಬಳಿ ರಾಡ್ ಸೇರಿದಂತೆ ಇತರ ಉಪಕರಣಗಳಿದ್ದವು. ಆದರೆ ನಮ್ಮ ಬಳಿ ಏನೂ ಇರಲಿಲ್ಲ. ದೇವರ ದಯೆಯಿಂದ ನಾವು ಬದುಕುಳಿದಿದ್ದೇವೆ" ಎಂದು ನನ್ನ ಮಗ ನನಗೆ ಹೇಳಿದನು ಎಂದು ಬಲವಂತ್ ಸಿಂಹ ಹೇಳಿದ್ದರು. ಇವರ ಹೇಳಿಕೆಯಿಂದ ಭಾರತೀಯ ಯೋಧರ ಬಳಿ ಶಸ್ತ್ರಾಸ್ತ್ರವಿರಲಿಲ್ಲ ಎಂಬುದು ಅರ್ಥವಾಗುತ್ತದೆ. ಪ್ರಧಾನಿ ಮೋದಿಯನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸಚಿವರೆಲ್ಲ ನಮಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಮತ್ತೆ ರಾಹುಲ್ ಗಾಂಧಿ ಕಿಡಿಕಾರಿದ್ದರು.
ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಾಯಾಳು ಯೋಧನೆ ತಂದೆ, ಭಾರತೀಯ ಸೇನೆ ಪ್ರಬಲ ಸೈನ್ಯವಾಗಿದ್ದು, ಚೀನಾವನ್ನು ಸೋಲಿಸಬಲ್ಲದು. ರಾಹುಲ್ ಗಾಂಧಿಯವರು ಈ ವಿಷಯದಲ್ಲಿ ರಾಜಕೀಯ ಮಾಡಬಾರದು. ನನ್ನ ಮಗ ಸೇನೆಯಲ್ಲಿ ಹೋರಾಡಿದ್ದಾನೆ, ಹೋರಾಟವನ್ನು ಮುಂದುವರಿಸುತ್ತಾನೆ ಎಂದು ಹೇಳಿದ್ದಾರೆ.