ನವದೆಹಲಿ:ಜಾರ್ಖಂಡ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಭಾರತ ಸದ್ಯ 'ಮೇಕ್ ಇನ್ ಇಂಡಿಯಾ' ಬದಲಾಗಿ 'ರೇಪ್ ಇನ್ ಇಂಡಿಯಾ' ಆಗಿದೆ ಎಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಲೋಕಸಭೆಯಲ್ಲಿ ಭಾರಿ ವಿರೋಧ ಕೇಳಿಬಂದಿದೆ.
ಲೋಕಸಭೆಯಲ್ಲಿ ರಾಗಾ ಹೇಳಿಕೆಗೆ ಭಾರಿ ಗದ್ದಲ ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ರಾಗಾ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗಿದೆ. ಕಲಾಪ ಆರಂಭದಲ್ಲೇ ಈ ರಾಹುಲ್ ಮಾತು ಪ್ರಸ್ತಾಪವಾಗಿದೆ. ಲೋಕಸಭೆಯಲ್ಲಿ ಗದ್ದಲ ಹೆಚ್ಚಾದ ಪರಿಣಾಮ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ.
ಮೇಕ್ ಇನ್ ಇಂಡಿಯಾ ಅಲ್ಲ, ರೇಪ್ ಇನ್ ಇಂಡಿಯಾ... ಮೋದಿ ಸರ್ಕಾರದ ವಿರುದ್ಧ ರಾಗಾ ವಾಗ್ದಾಳಿ!
ಇಂದು ಲೋಕಸಭೆ ಕಲಾಪ ಆರಂಭಗೊಂಡ ವೇಳೆ ರಾಗಾ ಹೇಳಿಕೆಯನ್ನು ಪ್ರಸ್ತಾಪಿಸಿದ ಸಂಸದೆ ಸ್ಮೃತಿ ಇರಾನಿ, ದೇಶದ ಮಹಿಳೆಯರು ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದಾರೆ ಎಂದು ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಕೀಯ ನಾಯಕರೊಬ್ಬರು ಹೇಳುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಸ್ಮೃತಿ ಇರಾನಿ, ಪ್ರಹ್ಲಾದ್ ಜೋಶಿ, ರಾಜನಾಥ್ ಸಿಂಗ್ ಸೇರಿದಂತೆ ಹಲವು ಸಂಸದರು ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಡಿಎಂಕೆ ಸಂಸದೆ ಕನ್ನಿಮೋಳಿ, ರಾಗಾ ಹೇಳಿಕೆಯ ಒಟ್ಟಾರೆ ಅರ್ಥ ಮಹಿಳೆಯರ ಬಗೆಗಿನ ಅವರ ಕಾಳಿಜಿಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದ ರಾಗಾ ಹೇಳಿಕೆ:
ರಾಜ್ಯಸಭೆ ಕಲಾಪದ ಆರಂಭದಲ್ಲಿ ಕೆಲವು ಸಂಸದರು ರಾಹುಲ್ ಗಾಂಧಿ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಎಂ.ವೆಂಕಯ್ಯ ನಾಯ್ಡು, ಈ ಸದನದ ಸದಸ್ಯರಲ್ಲದ ಓರ್ವರ ಹೆಸರನ್ನು ಇಲ್ಲಿ ಪ್ರಸ್ತಾಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.