ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಗೈರಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಟ್ವಿಟ್ಟರ್ ಮೂಲಕ ಕೇಂದ್ರದ ವಿರುದ್ಧ ಭಾರತ- ಚೀನಾ ಗಡಿ ವಿವಾದ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿ ಹಲವು ಪ್ರಶ್ನೆ ಎತ್ತಿದ್ದಾರೆ.
ಕಳೆದ ವಾರ ವೈದ್ಯಕೀಯ ತಪಾಸಣೆಗಾಗಿ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ವಿದೇಶಕ್ಕೆ ತೆರಳಿರುವ ರಾಹುಲ್ ಅವರು ಮೋದಿ ಕ್ಯಾಬಿನೆಟ್ ಸಚಿವರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಗುರಿಯಾಗಿಸಿ ಕೊಂಡು ಇಂದು ಟ್ವೀಟ್ ಮಾಡಿದ್ದಾರೆ.
ದಯವಿಟ್ಟು ಕಾಲಗಣನೆ ಅರ್ಥಮಾಡಿಕೊಳ್ಳಿ. ಚೀನಾದ ಯಾರೊಬ್ಬರೂ ಭಾರತೀಯ ಗಡಿ ಪ್ರದೇಶ ದಾಟಿ ಒಳಬಂದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಕೆಲ ದಿನಗಳ ಬಳಿಕ, ಸರ್ಕಾರ ಚೀನಾ ಮೂಲದ ಬ್ಯಾಂಕ್ನಿಂದ ಭಾರಿ ಪ್ರಮಾಣದ ಸಾಲ ತೆಗೆದುಕೊಂಡಿತು. ಆ ಮೇಲೆ ರಕ್ಷಣಾ ಸಚಿವರು ಚೀನಾ ಅತಿಕ್ರಮಣವಾಗಿ ಗಡಿ ಪ್ರವೇಶ ಮಾಡಿದೆ ಎಂದರು. ಈಗ ಗೃಹ ಸಚಿವರು ಯಾವುದೇ ಅತಿಕ್ರಮಣ ನಡೆದಿಲ್ಲ ಎನ್ನುತ್ತಿದ್ದಾರೆ ಎಂದು ಬರೆದಿದ್ದಾರೆ.
ಮೋದಿ ಸರ್ಕಾರವು ಭಾರತೀಯ ಸೇನೆ ಅಥವಾ ಚೀನಾದೊಂದಿಗೆ ಇದೆಯಾ? ಮೋದಿಜಿ, ಯಾಕೆ ಇಷ್ಟು ಹೆದರುತ್ತಿದ್ದೀರಾ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.