ನವದೆಹಲಿ: ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಶುಕ್ರವಾರ ಉದ್ಘಾಟನೆಗೊಂಡ 750 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ಮೋದಿ ಹೇಳಿದ ಮಾತನ್ನು ನಂಬಬೇಡಿ ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 750 ಮೆಗಾವ್ಯಾಟ್ ಸೌರ ಯೋಜನೆಯನ್ನು ಮಧ್ಯಪ್ರದೇಶದ ರೇವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದಂದು ಉದ್ಘಾಟನೆಗೊಳಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿಯವರ ಟ್ವೀಟ್ನ್ನು ಹಾಕಿ ಅಸತ್ಯಾಗ್ರಹಿ ಎಂದು ಬರೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಮತ್ತು ರಾಜ್ಯದ ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಹ ಪ್ರಧಾನಿಯವರ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದು, ರೇವಾ ಸೌರ ಪಾರ್ಕ್ (750 ಮೆಗಾವ್ಯಾಟ್) ಏಷ್ಯಾದ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ಎಂದು ಹೇಗೆ ಹೇಳಲು ಸಾಧ್ಯ? ಕರ್ನಾಟಕದ ಪಾವಗಡದಲ್ಲಿ 2018ರಿಂದ 2,000 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಕಾರ್ಯಾಚರಿಸುತ್ತಿರುವಾಗ ರೇವಾದ ಸೋಲಾರ್ ಪಾರ್ಕ್ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದೆಂದು ಹೇಗೆ ಹೇಳಲು ಸಾಧ್ಯ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ರೇವಾ ಯೋಜನೆಯು 250 ಮೆಗಾವ್ಯಾಟಿನ ಮೂರು ಸೌರ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ, ಈ ಸೌರ ಪಾರ್ಕ್ 500 ಹೆಕ್ಟೇರ್ ಜಾಗದಲ್ಲಿದೆ.