ಪಾಟ್ನಾ:ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಕೆಲವೇ ತಿಂಗಳು ಬಾಕಿ ಉಳಿದುಕೊಂಡಿದ್ದು, ಇದರ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ಆರ್ಜೆಡಿಯ ಹಿರಿಯ ನಾಯಕ ಪಕ್ಷ ತೊರೆದಿದ್ದಾರೆ.
ಲಾಲು ಪ್ರಸಾದ್ ಯಾದವ್ ಆಪ್ತ ಹಾಗೂ ಪಕ್ಷದ ಹಿರಿಯ ನಾಯಕ ರಘುವಂಶ್ ಪ್ರಸಾದ್ ಸಿಂಗ್ ದಿಢೀರ್ ಆಗಿ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಇದರ ಮಧ್ಯೆ ಅವರು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೇರಿಕೊಳ್ಳಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದೆ. ಈ ಹಿಂದೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ರಘುವಂಶ್ ಪ್ರಸಾದ್ ಆರ್ಜೆಡಿ ಪಕ್ಷದಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.
1997ರಲ್ಲಿ ಪಕ್ಷ ಸ್ಥಾಪನೆಗೊಂಡಾಗಿನಿಂದಲೂ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿಯಲ್ಲಿ ಕಾಣಿಸಿಕೊಂಡಿದ್ದ ಇವರು, ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸದ್ಯ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ಗೆ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅಲ್ಲಿಂದಲೇ ತಮ್ಮ ನಿರ್ಧಾರ ಹೊರಹಾಕಿದ್ದಾರೆ.