ಕಳೆದ ಬಜೆಟ್ ಅಧಿವೇಶನ ಮುಗಿದು 174 ದಿನಗಳ ದೀರ್ಘ ಅವಧಿ ನಂತರ ಸೆಪ್ಟೆಂಬರ್ 14 ರಿಂದ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭವಾಗಲಿದೆ. ಕಳೆದ ಹಲವು ದಶಕಗಳಲ್ಲಿ ಈ ರೀತಿ ಸಂಸತ್ ಅಧಿವೇಶನ ವಿಳಂಬವಾಗುವ ಘಟನೆ ಎಂದಿಗೂ ಆಗಿರಲಿಲ್ಲ.! ಸಂಸತ್ತಿನ ಎರಡು ಸದನಗಳ ಅಧಿವೇಶನಗಳ ನಡುವಿನ ಅಂತರವು ಆರು ತಿಂಗಳು ಮೀರಬಾರದು ಎಂಬ ಸಾಂವಿಧಾನಿಕ ನಿಯಮಾವಳಿ ಅನುಸಾರವಾಗಿ ನಡೆಯುತ್ತಿರುವ ಮಾನ್ಸೂನ್ ಅಧಿವೇಶನವನ್ನು ಈ ಬಾರಿ 'ಕೋವಿಡ್ ಸೆಷನ್' ಎಂದು ಕರೆಯಬಹುದು. ಏಕೆಂದರೆ ಮಹಾಮಾರಿ ಕೋವಿಡ್ ಸಾಂಕ್ರಾಮಿಕ ರೋಗವು 41 ಲಕ್ಷಕ್ಕೂ ಹೆಚ್ಚು ಜನರಿಗೆ ಹಬ್ಬಿದೆ ಮತ್ತು ದೇಶಾದ್ಯಂತ 70 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಕೇಂದ್ರವು ಘೋಷಿಸಿದ ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಸತ್ತಿನ ಕಾರ್ಯ ಕಲಾಪಗಳ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದೆ.
ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಯಾವುದೇ ವಿರಾಮವಿಲ್ಲದೆ ನಡೆಯಲಿರುವ ಈ ಅಧಿವೇಶನಗಳು ಎರಡು ಪಾಳಿಯಲ್ಲಿ ಅಂದರೆ ಬೆಳಿಗ್ಗೆ ಲೋಕಸಭೆ ಮತ್ತು ಮಧ್ಯಾಹ್ನ ರಾಜ್ಯಸಭೆ ಕಲಾಪಗಳು ನಡೆಯಲಿದೆ. ಇತ್ತೀಚಿನ ನಿಯಮಗಳು ಪ್ರಕಾರ ಕಲಾಪಗಳ ಪಾಳಿ ಅವಧಿಯನ್ನ ಕೇವಲ ನಾಲ್ಕು ಗಂಟೆಗಳವರೆಗೆ ಸೀಮಿತಗೊಳಿಸುವುದರಿಂದ, ಯಾವುದೇ ಪ್ರಶ್ನೋತ್ತರ ಅವಧಿ ಇರುವುದಿಲ್ಲ, ಶೂನ್ಯ ಅವಧಿಯನ್ನ ಅರ್ಧ ಗಂಟೆಗೆ ಸೀಮಿತಗೊಳಿಸಲಾಗಿದೆ. ಇನ್ನೂ, ಖಾಸಗಿ ಸದಸ್ಯರ ಬಿಲ್‌ಗಳನ್ನು ಅನುಮತಿಸಲಾಗುವುದಿಲ್ಲ.
ಗಡಿಯಲ್ಲಿ ಚೀನಾದ ಅತಿಕ್ರಮಣಗಳು, ದೇಶೀಯವಾಗಿ ಕರೋನಾ ಸಾವುಗಳು, ಶೇಕಡಾ ಮೈನಸ್ 23 ರಷ್ಟು ಬೆಳವಣಿಗೆಯ ದರ ಕುಸಿದಿರುವುದು, ಉದ್ಯೋಗ ಕ್ಷೇತ್ರ ಸ್ಥಗಿತ ಮತ್ತು ಇನ್ನೆಂದು ನೋಡದ ರೀತಿ ಕೈಗಾರಿಕಾ ಪ್ರಗತಿ ಕುಸಿತ. ಇವೆಲ್ಲವೂ ದೇಶದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಸಾರ್ವಜನಿಕ ಕಲ್ಯಾಣದ ವ್ಯಾಪಕ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವುದು ಉತ್ತರ ಪಡೆಯುವುದಕ್ಕೆ ಪ್ರಶ್ನೋತ್ತರ ಅವಧಿ ಅತ್ಯಂತ ಉತ್ತಮ ವೇದಿಕೆಯಾಗಬಹುದು. ಪ್ರಶ್ನೋತ್ತರ ಅವಧಿ ರದ್ದಾದ ಹೊರತಾಗಿಯೂ, ಕೇಂದ್ರ ಸರ್ಕಾರವು ವಿಪಕ್ಷದ ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ನೀಡುತ್ತದೆ ಎಂದು ಹೇಳುತ್ತದೆ - ಆದರೆ, ಆ ರೀತಿಯ ಉತ್ತರಗಳು ಮೌಖಿಕ ಉತ್ತರಗಳಿಗೆ ಬದಲಿ ಉತ್ತರವಾಗುವುದಿಲ್ಲ. ಪ್ರಜಾಪ್ರಭುತ್ವದ ಸಾರವು ಹೊಣೆಗಾರಿಕೆಯಾಗಿದ್ದಾಗ ಪ್ರಶ್ನೋತ್ತರ ಅವಧಿಯನ್ನ ರದ್ದು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇಂಡೋ-ಚೀನಾ ಮತ್ತು ಇಂಡೋ-ಪಾಕ್ ಯುದ್ಧಗಳ ತುರ್ತು ಸಂದರ್ಭದಲ್ಲಿ ಪ್ರಶ್ನೋತ್ತರ ಅವಧಿ ರದ್ದುಗೊಳಿಸಿದ ಉದಾಹರಣೆಗಳಿದ್ದರೂ, ಪ್ರಸ್ತುತ ಬಿಕ್ಕಟ್ಟು ಅವಗಳಗಿಂತ ಭಿನ್ನವಾಗಿದೆ. ಪ್ರಬುದ್ಧ ಪ್ರಶ್ನೋತ್ತರ ಅವಧಿಯು ಬಿಕ್ಕಟ್ಟಿನ ಸಮಯದಲ್ಲಿ ಸಂಸತ್ತಿನ ಚರ್ಚೆ ನಡೆಸಲು ಸೂಕ್ತ ವೇದಿಕೆಯಾಗಲಿದೆ.