ನವದೆಹಲಿ:ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚಿಸಲು ತಮ್ಮ ಭೇಟಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.
ರಾಜ್ಯದ ಜನಪ್ರತಿನಿಧಿಗಳು ದೆಹಲಿಯ ರಾಜ್ ಘಾಟ್ನಲ್ಲಿ ನವೆಂಬರ್ 4ರಂದು ಧರಣಿ ನಡೆಸಲಿದ್ದು, ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಕೊರತೆ, ಅಗತ್ಯ ಸರಕುಗಳ ಪೂರೈಕೆಯ ಕೊರತೆ ಹಾಗೂ ರಾಜ್ಯದಲ್ಲಿ ಗೂಡ್ಸ್ ರೈಲುಗಳ ಚಲನೆಗೆ ಕೇಂದ್ರದ ನಿರಾಕರಣೆ ಮುಂತಾದ ವಿಚಾರಗಳ ವಿರುದ್ಧ ಧ್ವನಿಯೆತ್ತಲಾಗುತ್ತದೆ ಎಂದು ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ಗೆ ಗೂಡ್ಸ್ ರೈಲುಗಳನ್ನು ಸ್ಥಗಿತಗೊಳಿಸಿದಾಗಿನಿಂದ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಇದರಿಂದಾಗಿ ಬಹುತೇಕ ವಿದ್ಯುತ್ ಸ್ಥಾವರಗಳು ತಮ್ಮ ಕಾರ್ಯ ನಿಲ್ಲಿಸಿವೆ. ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮರೀಂದರ್ ಸಿಂಗ್ ಹೇಳಿದ್ದು, ಕೇಂದ್ರದ ಗಮನ ಸೆಳೆಯಲು ಸಾಂಕೇತಿಕ ಧರಣಿ ನಡೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.