ಪುಣೆ:ಇಲ್ಲಿನ ಕೆಫೆಯೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೆಫೆಯ ಮ್ಯಾನೇಜ್ಮೆಂಟ್ ಬಗ್ಗೆ ಮಹಿಳೆಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಹಿಂದೆ ಮಹಿಳೆಯೊಬ್ಬರು ಮಹಿಳಾ ಶೌಚಾಲಯದ ವಾಶ್ ರೂಮ್ ಒಳಗೆ ರಹಸ್ಯ ಕ್ಯಾಮೆರಾ ಇರುವುದನ್ನು ಹೇಗೆ ಪತ್ತೆ ಹಚ್ಚಿದ್ದೇನೆ ಎಂಬುದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅವರ ಸ್ಕ್ರೀನ್ ಶಾಟ್ ಫೋಟಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಮಹಿಳೆಯರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಪುಣೆಯ ಹಿಂಜವಾಡಿ ಪ್ರದೇಶದ 'ಕೆಫೆ ಬಿಹೈವ್'ಗೆ (Be Hive) ಭೇಟಿ ನೀಡಿದ್ದ ಮಹಿಳೆ, ಕೆಫೆಯ ಶೌಚಾಲಯಕ್ಕೆ ತೆರಳಿದ್ದಾರೆ. ಅಲ್ಲಿ ರಹಸ್ಯವಾಗಿ ಇಟ್ಟಿದ್ದ ಕ್ಯಾಮೆರಾ ಅವಳ ಕಣ್ಣಿಗೆ ಬಿದ್ದಿದೆ. ಕೂಡಲೇ ಈ ವಿಷಯವನ್ನು ಕೆಫೆ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದಾಳೆ. ನೀವು 10 ನಿಮಿಷ ಹೊರಗೆ ಇರಿ ಎಂದು ಮ್ಯಾನೇಜರ್, 10 ನಿಮಿಷದಲ್ಲಿ ಆ ಕ್ಯಾಮೆರಾ ತೆಗೆದು ಹಾಕಿದ್ದಾನೆ.
ಈ ಬಳಿಕ ಮ್ಯಾನೇಜರ್, ಈ ವಿಷಯದ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಮಹಿಳೆಗೆ ಹಣ ನೀಡಲು ಪ್ರಯತ್ನಿಸಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಂತರ ಪೊಲೀಸರಿಗೆ ತಿಳಿಸಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.