ಪುಣೆ: ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ವರುಣನ ಅಬ್ಬರಕ್ಕೆ ಪುಣೆಯ ಕೊಂಡ್ವಾದಲ್ಲಿ ಮಧ್ಯರಾತ್ರಿ ಪಾರ್ಕಿಂಗ್ ಗೋಡೆಯೊಂದು ಕುಸಿದು ಬಿದ್ದಿದ್ದು, ಸಾವಿ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಇನ್ನು ಹಲವು ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳದಲ್ಲೆ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿರುವ ಪುಣೆ ಜಿಲ್ಲಾಧಿಕಾರಿ ನವಲ್ ಕಿಶೋರ್ ರಾಮ್, ಈ ದುರ್ಘಟನೆಗೆ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿರುವವರ ನಿರ್ಲಕ್ಷ್ಯವೇ ಕಾರಣ. ಮೃತರು ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕರು ಎಂದು ಮಾಹಿತಿ ನೀಡಿದ್ದಾರೆ.
ಇತ್ತ ಮಹಾನಗರದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ನಗರದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಮುಂಬೈ ಮತ್ತು ಠಾಣೆ ಸುತ್ತ ಮುತ್ತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.