ಇಟಾ(ಉತ್ತರ ಪ್ರದೇಶ):ಸಹೋದರರ ಮಕ್ಕಳಾದ ಇಬ್ಬರು ಅಪ್ರಾಪ್ತರ ಕೊಲೆಗೈದು, ಮೂರನೇಯದಾಗಿ ತನ್ನ ಅಣ್ಣನನ್ನೇ ಕೊಡಲಿಯಿಂದ ಕೊಲ್ಲಲು ಸಂಚು ರೂಪಿಸಿದ ಆರೋಪದಲ್ಲಿ 30 ವರ್ಷ ವಯಸ್ಸಿನ ಸೈಕೋ ಕಿಲ್ಲರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇಟಾ ಜಿಲ್ಲೆಯ ಧರ್ಮಪುರ್ ಗ್ರಾಮದ ರಾಧೆಶ್ಯಾಮ್ ಬಂಧಿತ ಸೈಕೋ ಕಿಲ್ಲರ್ ಆಗಿದ್ದು, ಫೆಬ್ರವರಿ 6ರಂದು ತನ್ನ ಸಹೋದರನ ಮಗನಾದ ಸತ್ಯೇಂದ್ರ (6) ಹಾಗೂ ಜೂನ್ 9ರಂದು ಮತ್ತೊಬ್ಬ ಸಹೋದರನ ಮಗನಾದ ಪ್ರಶಾಂತ್ (9) ಅನ್ನು ಕೊಂದಿದ್ದ ಎಂದು ಆರೋಪ ಕೇಳಿಬಂದಿದೆ.
ಜೊತೆಗೆ ಜೂನ್ 11ರ ರಾತ್ರಿ ತನ್ನ ಅಣ್ಣನಾದ ವಿಶ್ವನಾಥ್ ಸಿಂಗ್ ನಿದ್ರೆ ಮಾಡುತ್ತಿರಬೇಕಾದರೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾಗ ಸಂಬಂಧಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಸಕ್ರೌಲಿ ಸ್ಟೇಷನ್ ಹೌಸ್ ಆಫೀಸರ್ ಕೃತ್ಪಾಲ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.