ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಚಿಲ್ಲಾ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಮಳೆ ಮತ್ತು ಶೀತ ವಾತಾವರಣವನ್ನು ಲೆಕ್ಕಿಸದೇ ರೈತರು ಪ್ರತಿಭಟಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿರುವ ನೂತನ ಕೃಷಿ ಕಾನೂನುಗಳ ರದ್ದತಿಗಾಗಿ ದೆಹಲಿಯ ಗಡಿಯಲ್ಲಿ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಭಾರಿ ಮಳೆ , ಕೊರೆಯುವ ಚಳಿಯಿಂದಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ 6 ಸುತ್ತಿನ ಮಾತುಕತೆ ನಡೆಸಿದರೂ ಕೂಡ ಕೇಂದ್ರದಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ. ಪರಿಣಾಮ ಇಂದೂ ಕೂಡ ಮಳೆ ಮತ್ತು ಶೀತ ವಾತಾವರಣವನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ರೈತರು ಮತ್ತು ಸರ್ಕಾರದ ನಡುವೆ 7 ನೇ ಸುತ್ತಿನ ಮಾತುಕತೆ ವಿಜ್ಞಾನ ಭವನದಲ್ಲಿ ಇಂದು ನಡೆಯಲಿದೆ. ಡಿಸೆಂಬರ್ 30 ರಂದು ರೈತರು ಮತ್ತು ಸರ್ಕಾರದ ನಡುವೆ 6 ನೇ ಸುತ್ತಿನ ಮಾತುಕತೆ ನಡೆದಿತ್ತು. ಈ ಮಾತುಕತೆ ವೇಳೆ ರೈತರ ನಾಲ್ಕು ಬೇಡಿಕೆಗಳ ಪೈಕಿ ಎರಡು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿತ್ತು. ಆದರೆ, ಕೃಷಿ ಕಾನೂನು ರದ್ಧತಿ ಕುರಿತಂತೆ ಸಹಮತ ವ್ಯಕ್ತವಾಗಿರಲಿಲ್ಲ.
ಇನ್ನು ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಪ್ರತಿಭಟನಾಕಾರರೊಬ್ಬರು, ನಾವು ಗುಡಾರಗಳಲ್ಲಿ ಆಶ್ರಯ ಪಡೆದಿದ್ದೇವೆ. ರಾಜಧಾನಿಯಲ್ಲಿ ಚಳಿ ಮತ್ತು ಮಳೆ ಸುರಿಯುತ್ತಿದೆ. ಆದರೂ ಕೂಡ ನಾವು ಹೋರಾಟವನ್ನು ಮುಂದುವರೆಸುತ್ತೇವೆ. ಸರ್ಕಾರ ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒಪ್ಪಿಕೊಂಡ ನಂತರವೇ ನಾವು ಪ್ರತಿಭಟನೆ ಕೈಬಿಡುತ್ತೇವೆ ಎಂದಿದ್ದಾರೆ.