ನವದೆಹಲಿ:ಕೃಷಿ ಮಸೂದೆಗಳನ್ನ ಹಿಂಪಡೆದುಕೊಳ್ಳುವವರೆಗೂ ರೈತರ ಪ್ರತಿಭಟನೆ ಮುಂದುವರೆಯಲಿದೆ ಎಂದು ವಿವಿಧ ರೈತ ಸಂಘಟನೆ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಕೃಷಿ ಮಸೂದೆಗಳ ವಿರುದ್ಧ ಕಳೆದ 40 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಇಂದು ನಡೆದ ಸಭೆಯಲ್ಲೂ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸಭೆ ಮುಕ್ತಾಯಗೊಂಡ ಬಳಿಕ ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕೈಟಿ, ಕೃಷಿ ಮಸೂದೆ ಹಿಂಪಡೆದುಕೊಳ್ಳುವವರೆಗೂ ನಾವು ಮನೆಗೆ ಹೋಗುವುದಿಲ್ಲ ಎಂದಿದ್ದಾರೆ.
ಕೇಂದ್ರಕ್ಕೆ ರೈತ ಮುಖಂಡರ ಎಚ್ಚರಿಕೆ ಓದಿ: ನಿಮ್ಮ ಊಟ ನೀವು ಮಾಡಿ, ನಮ್ಮದು ನಾವು ಮಾಡ್ತೀವಿ: ಸಚಿವರ ಆಹ್ವಾನ ತಿರಸ್ಕರಿಸಿದ ರೈತರು!
ಇದೇ ವೇಳೆ ಮಾತನಾಡಿರುವ ಆಲ್ ಇಂಡಿಯಾ ಕಿಸಾನ್ ಸಭಾ ಸೆಕ್ರೆಟರಿ ಹನನ್ ಮೊಲ್ಲಾ, ಕೃಷಿ ಮಸೂದೆ ಹಿಂಪಡೆದುಕೊಳ್ಳುವ ಬಗ್ಗೆ ಕೇಂದ್ರ ಮಾತನಾಡುತ್ತಿಲ್ಲ. ಆದರೆ ಇದನ್ನು ಹೊರತುಪಡಿಸಿ ಬೇರೆ ವಿಷಯ ಮಾತನಾಡಲು ನಮಗೂ ಸಾಧ್ಯವಿಲ್ಲ ಎಂದಿದ್ದಾರೆ. ಕೃಷಿ ಮೂಸುದೆಗಳಲ್ಲಿನ ಕಾನೂನು ವಿಷಯದ ಬಗ್ಗೆ ಮಾತನಾಡಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಆದರೆ ನಾವು ಮಸೂದೆಗಳನ್ನ ಹಿಂಪಡೆದುಕೊಳ್ಳುವಂತೆ ಆಗ್ರಹಿಸುತ್ತಿದ್ದೇವೆ. 7 ಸುತ್ತಿನ ಮಾತುಕತೆ ನಡೆದಿದ್ದರೂ ಕೇಂದ್ರ ಇಲ್ಲಿಯವರೆಗೆ ಯಾವುದೇ ರೀತಿಯ ಪರಿಹಾರ ಕಂಡು ಹಿಡಿದಿಲ್ಲ ಎಂದು ಹೇಳಿದ್ದಾರೆ.