ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ ಕೆಂಪು ಟಿ ಶರ್ಟ್ ಧರಿಸಿದ್ದ ಶಾರುಖ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಈಶಾನ್ಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
7 ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ:
ಜಫ್ರಾಬಾದ್ನಲ್ಲಿ ನಡೆದ ಪೌರತ್ವ (ತಿದ್ದುಪಡಿ) ಕಾಯ್ದೆ ಪರ-ವಿರೋಧದ ಪ್ರತಿಭಟನೆಯು ತೀವ್ರ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ 7 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಿಡಿಗೇಡಿಗಳು, ವಾಹನಗಳು, ಮನೆಗಳು ಹಾಗು ಪೆಟ್ರೋಲ್ ಬಂಕ್‌ಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿ ನಂದಿಸುವ ವೇಳೆ ಮೂವರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮೆಟ್ರೋ ಸಂಚಾರ ಸ್ಥಗಿತ:
ದೆಹಲಿಯ ಅಲ್ಲಲ್ಲಿ ಹಿಂಸಾಚಾರ ವರದಿಯಾಗಿದ್ದು ಜಫ್ರಾಬಾದ್, ಮೌಜ್ಪುರ್, ಬಾಬರ್ಪುರ, ಗೋಕುಲ್ಪುರಿ ಹಾಗು ಶಿವ ವಿಹಾರ್‌ನಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.