ಲಖನೌ(ಉತ್ತರ ಪ್ರದೇಶ) :ಕಳೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಹೊಣೆ ಹೊತ್ತಿದ್ದರು. ಇದೀಗ ಮುಂದಿನ ವಿಧಾನಸಭೆ ಹಾಗು ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅವರು ಲಖನೌನಲ್ಲಿ ಭದ್ರವಾಗಿ ನೆಲೆಯೂರಿ ರಾಜಕೀಯ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಇದಕ್ಕಾಗಿ ಜನವರಿಯಿಂದ ಕಾಂಗ್ರೆಸ್‌ನ ಹಿರಿಯ ನಾಯಕಿ ದಿ.ಶೀಲಾ ಕೌಲ್ ಅವರ ನಿವಾಸದ ನವೀಕರಣ ಕಾರ್ಯಗಳನ್ನು ಆರಂಭಿಸಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಈ ಕೆಲಸ ವಿಳಂಬವಾಗಿತ್ತು. ಕೋವಿಡ್-19 ತೀವ್ರತೆ ಕಡಿಮೆಯಾದ ತಕ್ಷಣ ಪ್ರಿಯಾಂಕಾ ವಾದ್ರಾ ಇದೇ ನಿವಾಸದಲ್ಲಿ ವಾಸ್ತವ್ಯ ಹೂಡುವ ನಿರೀಕ್ಷೆಯಿದೆ. ಈ ಮೂಲಕ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ನೆಲೆಯೂರಿ ಪ್ರಬಲ ಪೈಪೋಟಿಗಿಳಿಯಲು ಅವರು ನಿರ್ಧರಿಸಿದಂತೆ ಕಾಣುತ್ತಿದೆ.
ಪ್ರಿಯಾಂಕಾ ಈ ಹಿಂದೆ ಮೂರು ಬಾರಿ ಲಖನೌಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಇದೇ ಮನೆಯಲ್ಲಿ ತಂಗಿದ್ದರು. ಲೋಧಿ ಎಸ್ಟೇಟ್ನಲ್ಲಿರುವ ಅವರ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಅವರಿಗೆ ನೋಟಿಸ್ ನೀಡಿತ್ತು. ಹೀಗಾಗಿ ತಮ್ಮ ರಾಜಕೀಯ ಶಿಬಿರವನ್ನು ಲಖನೌದಲ್ಲಿ ಸ್ಥಾಪಿಸಲು ಅವರು ಯೋಚಿಸಿದ್ದರು ಎಂದು ವಾದ್ರಾ ಆಪ್ತರೊಬ್ಬರು ತಿಳಿಸಿದ್ದಾರೆ.