ನವದೆಹಲಿ : ಉತ್ತರ ಪ್ರದೇಶ ಕಾಂಗ್ರೆಸ್ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಹನವಾಜ್ ಆಲಂ ಅವರನ್ನು ಬಂಧಿಸಿರುವುದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದು, ಪೊಲೀಸರ ಕ್ರಮವು ದಮನಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಾರ್ವಜನಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಬದ್ಧರಾಗಿದ್ದಾರೆ. ಬಿಜೆಪಿ ಸರ್ಕಾರ ಇತರ ಪಕ್ಷಗಳ ಧ್ವನಿಯಡಗಿಸಲು ಪೊಲೀಸರನ್ನು ಒಂದು ಸಾಧನವಾಗಿ ಬಳಸುತ್ತಿದೆ. ಯುಪಿ ಪೊಲೀಸರು ನಮ್ಮ ಅಲ್ಪ ಸಂಖ್ಯಾಂತ ಘಟಕದ ಅಧ್ಯಕ್ಷರನ್ನು ರಾತ್ರಿ ಸಮಯದಲ್ಲಿ ಹೇಗೆ ಬಂಧಿಸಿದರು ಎಂಬುವುದನ್ನು ನೋಡಿ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಮೊದಲು, ನಮ್ಮ ಪಕ್ಷದ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರನ್ನು ಸುಳ್ಳು ಪ್ರಕರಣದಲ್ಲಿ ನಾಲ್ಕು ವಾರಗಳ ಕಾಲ ಜೈಲಲ್ಲಿ ಇರಿಸಲಾಗಿತ್ತು. ಇದು ಪೊಲೀಸರ ದಮನಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿ. ಸುಳ್ಳು ಪ್ರಕರಣಗಳಿಗೆಲ್ಲ ನಮ್ಮ ಕಾರ್ಯಕರ್ತರು ಹೆದರುವುದಿಲ್ಲ ಎಂದು ಪ್ರಿಯಾಂಕ ಗಾಂಧಿ ಇನ್ನೊಂದು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸೋಮವಾರ ತಡರಾತ್ರಿ ಲಖನೌ ಪೊಲೀಸರು ಆಲಂ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಮುಖ್ಯಮಂತ್ರಿಯ ನಿವಾಸದ ಸಮೀಪವಿರುವ ಅಪಾರ್ಟ್ಮೆಂಟ್ನಿಂದ ಆಲಂ ಅವರನ್ನು ಬಂಧಿಸಿ ಕರೆದೊಯ್ಯುತ್ತಿರುವ ಸಿಸಿಟಿವಿ ವಿಡಿಯೋವೊಂದನ್ನು ಯುಪಿ ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದ್ದಾರೆ. 2019 ರ ಡಿಸೆಂಬರ್ 19 ರಂದು ಲಖನೌದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಆಲಂ ಅವರನ್ನು ಬಂಧಿಸಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ.