ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.24ರಿಂದ ಎರಡು ದಿನಗಳ ಕಾಲ ಭಾರತದ ಪ್ರವಾಸ ಕೈಗೊಳ್ಳುತ್ತಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಕಲ ಸೌಲಭ್ಯ ಏರ್ಪಾಡು ಮಾಡಿ, ವಿಶ್ವದ ದೊಡ್ಡಣ್ಣನ ಆಗಮನಕ್ಕಾಗಿ ಕಾತುರದಿಂದ ಎದುರು ನೋಡುತ್ತಿದೆ.
ಟ್ರಂಪ್ ಭೇಟಿ... ಇಷ್ಟೊಂದು ಹಣ ಖರ್ಚು ಮಾಡುವ ಅವಶ್ಯಕತೆ ಇದೆಯಾ? ಬಿಜೆಪಿ ಪ್ರಶ್ನಿಸಿದ ಪ್ರಿಯಾಂಕಾ!
ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಈಗಾಗಲೇ ಎಲ್ಲಡೆ ಅವರ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡೊನಾಲ್ಡ್ ಟ್ರಂಪ್ ಆಗಮನಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡುವ ಅವಶ್ಯಕತೆ ಇದೆಯಾ ಎಂದು ಪ್ರಶ್ನೆ ಮಾಡಿದ್ದು, ಅವರನ್ನ ಬರಮಾಡಿಕೊಳ್ಳಲು 100 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಅವರ ಆಗಮನಕ್ಕಾಗಿ ಸಮಿತಿ ರಚನೆ ಮಾಡಿ ಅದರ ಮೂಲಕ ಹಣ ಖರ್ಚು ಮಾಡಲಾಗುತ್ತಿದ್ದು, ಆ ಸಮಿತಿಯಲ್ಲಿ ಇರುವ ಸದಸ್ಯರು ಯಾರು, ಹಣ ನೀಡುತ್ತಿರುವುದು ಯಾವ ಸಚಿವಾಲಯ ಎಂಬ ಮಾಹಿತಿ ತಿಳಿಯುವ ಹಕ್ಕು ದೇಶಕ್ಕೆ ಇಲ್ಲವೇ ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಅಹಮದಾಬಾದ್ನಲ್ಲಿ ಈಗಾಗಲೇ ಬ್ಯಾನರ್ಸ್, ಹೋರ್ಡಿಂಗ್ಸ್ಗಳು ಅಮೆರಿಕದ ದೊಡ್ಡಣ್ಣನ ವೆಲ್ಕಮ್ ಮಾಡಿಕೊಳ್ಳಲು ರಾರಾಜಿಸುತ್ತಿದ್ದು, ಎಲ್ಲಿ ನೋಡಿದ್ರೂ ಅವುಗಳದ್ದೇ ಸದ್ದು. ಇದರ ಮಧ್ಯೆ ಗೋಡೆಗಳ ಮೇಲೂ ಅವರ ಚಿತ್ರಗಳು ಕಂಡು ಬರುತ್ತಿದ್ದು, ಇಷ್ಟೊಂದು ಹಣ ಖರ್ಚು ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.