ನವದೆಹಲಿ:ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದಿರುವ 20 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ.
ಇಂದು ದೆಹಲಿಯ ವಾಲ್ಮೀಕಿ ದೇವಸ್ಥಾನದಲ್ಲಿ ಆಯೋಜನೆ ಮಾಡಿದ್ದ ಪ್ರತಿಭಟನಾ ಸಮಾರಂಭದಲ್ಲಿ ಭಾಗಿಯಾದ ಪ್ರಿಯಾಂಕಾ ಗಾಂಧಿ ಸಂತ್ರಸ್ತ ಯುವತಿಗೆ ಗೌರವ ಸಲ್ಲಿಸಿ ಮಾತನಾಡಿದರು. ನಮ್ಮ ಸಹೋದರಿಗೆ ನ್ಯಾಯ ಸಿಗುವವರೆಗೂ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಕೇಂದ್ರ ಹಾಗೂ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಾಲ್ಮೀಕಿ ದೇವಸ್ಥಾನದಲ್ಲಿ ಪ್ರಿಯಾಂಕಾ ಪ್ರತಿಜ್ಞೆ ಹಥ್ರಾಸ್ ಸಂತ್ರಸ್ತೆ ಕುಟುಂಬದವರನ್ನ ಭೇಟಿ ಮಾಡಲು ಹೊರಟಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನ ನೋಯ್ಡಾ ಪೊಲೀಸರು ನಿನ್ನೆ ತಡೆ ಹಿಡಿದು ವಾಪಸ್ ದೆಹಲಿಗೆ ಕಳುಹಿಸಿದ್ದರು. ಆದರೆ, ಇಂದು ವಾಲ್ಮೀಕಿ ದೇವಸ್ಥಾನದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಸಂತ್ರಸ್ತೆ ಕುಟುಂಬಕ್ಕೆ ಸರ್ಕಾರ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಅವರ ಕುಟುಂಬ ಅಸಹಾಯಕವಾಗಿದೆ. ನಾವು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ಹಿಂದೂ ಪದ್ಧತಿ ಅನುಸರಣೆ ಮಾಡಿ ಸಂತ್ರಸ್ತೆಯ ಶವಸಂಸ್ಕಾರ ಸಹ ನಡೆಸಿಲ್ಲ ಎಂದು ವಾದ್ರಾ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಮತ್ತು ಯುಪಿಯಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಾರ್ವಜನಿಕರಿಂದ ಹೆಚ್ಚು ಆಕ್ರೋಶಕ್ಕೊಳಗಾಗುತ್ತಿದೆ ಎಂದಿದ್ದಾರೆ.