ನವದೆಹಲಿ: ಭಾರತದ ಮಹತ್ವದ ಸಾಧನೆ 'ಮಿಷನ್ ಶಕ್ತಿ' ಹೆಗ್ಗಳಿಕೆಯನ್ನು ತಮ್ಮ ಬತ್ತಳಿಕೆಯಲ್ಲಿ ಹಾಕಿಕೊಳ್ಳಲು ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ದೇಶದ ಮೊದಲ ಪ್ರಧಾನಿ ನೆಹರು ಅವರೇ ಡಿಆರ್ಡಿಒ ಸ್ಥಾಪಿಸಿದ್ದು ಎಂದು ಹೇಳುವ ಮೂಲಕ ಬಿಜೆಪಿಗೆಪೂರ್ವ ಉತ್ತರಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಪ್ರಿಯಾಂಕಾ ಗಾಂಧಿ ಟಾಂಗ್ ಕೊಟ್ಟಿದ್ದಾರೆ.
'ಮಿಷನ್ ಶಕ್ತಿ' ಮೂಲಕ ನರೇಂದ್ರ ಮೋದಿ ಭಾರತದ ಭದ್ರತಾ ವಲಯವನ್ನು ಸಶಕ್ತಗೊಳಿಸಿದ್ದಾರೆ ಎಂದು ಬಿಜೆಪಿ ಪಾಳಯ ಬಣ್ಣಿಸುತ್ತಿದೆ. ಇತ್ತ ಪ್ರಿಯಾಂಕಾ ಗಾಂಧಿ, ಡಿಆರ್ಡಿಒ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಲೇ, ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ನೆಹರು ಎಂದು ಹೇಳಿದ್ದಾರೆ.
ಡಿಆರ್ಡಿಒ ಸ್ಥಾಪನೆ ಮಾಡಿದ್ದು ನೆಹರು ಎಂದ ಪ್ರಿಯಾಂಕಾ ಗಾಂಧಿ ಡಿಆರ್ಡಿಒ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತದ ಸರ್ವಶ್ರೇಷ್ಠ ಸಂಸ್ಥೆಯನ್ನು 1950ರಲ್ಲಿ ಪಂಡಿತ್ ನೆಹರು ಅವರು ಸ್ಥಾಪಿಸಿದ್ದರು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಡಿಆರ್ಡಿಒ ಕಾರ್ಯ ರಾಜಕೀಯಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಯಾವ ವಿಚಾರಗಳು ರಾಜಕೀಯ ಬಣ್ಣ ಪಡೆಯಬಾರದಿತ್ತೋ ಅವೇ ರಾಜಕೀಯಗೊಂಡಿವೆ. ಚುನಾವಣೆ ಎಂಬುದು ವಾಸ್ತವತೆ ಆಧರಿಸಿ ನಡೆಯಬೇಕು. ನಾನು ಇದನ್ನೇ ಪಾಲಿಸುತ್ತೇನೆ ಎಂದಿದ್ದಾರೆ.
ಇನ್ನು ಕನಿಷ್ಠ ಆದಾಯ ಭದ್ರತಾ ಯೋಜನೆ ಕುರಿತು ಬಿಜೆಪಿ ಟೀಕೆ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವ ಹೆಜ್ಜೆ ಇಟ್ಟೆವು. ನಾವು ನುಡಿದಂತೆ ನಡೆಯುತ್ತೇವೆ. ಇದನ್ನು ಸುಳ್ಳು ಎಂದವರೇ ಕಪಟಿಗಳು. ಈ ಚುನಾವಣೆ ದೇಶದ ಉಳಿವಿಗೆ ಅತ್ಯಗತ್ಯ ಎಂದರು.