ಅಹಮದಾಬಾದ್:ಜೈಲಿನಿಂದ ಹೊರ ಬಂದರೆ ಕೊರೊನಾ ಸೋಂಕು ತಗುಲುತ್ತದೆಂಬ ಭೀತಿಯಿಂದ ಜೈಲಿನಲ್ಲೇ ಇರಲು ಬಿಡಿ ಎಂದು ಕೈದಿಗಳಿಬ್ಬರೂ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಸೃಷ್ಟಿಸಿರುವ ಭೀತಿ ಎಷ್ಟು ಪ್ರಬಲವಾಗಿದೆ ಎಂಬುದನ್ನು ಈ ಘಟನೆಯಿಂದ ತಿಳಿಯಬಹುದು.
ಗುಜರಾತಿನ ನರ್ಮದಾ ಜಿಲ್ಲೆ ರಾಜಪಿಪ್ಲಾ ಜೈಲಿನಲ್ಲಿರುವ ಕೈದಿಗಳಿಬ್ಬರ ಬಿಡುಗಡೆಗೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಕೈದಿಗಳು ಮಾತ್ರ ಹೊರ ಹೋಗಲು ತಯಾರಿಲ್ಲ. ಹೊರಗೆ ಹೋದರೆ ಕೊರೊನಾ ಸೋಂಕು ತಗುಲುವ ಭೀತಿ ಇದೆ. ತಮಗೆ ಜೈಲಿನಲ್ಲೇ ಇರಲು ಬಿಡಿ ಎನ್ನುತ್ತಿದ್ದಾರೆ.
ಏಳು ವರ್ಷಕ್ಕೂ ಕಡಿಮೆ ಅವಧಿಯ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಸುಪ್ರೀಂಕೋರ್ಟಿನ ಉಚ್ಛಾಧಿಕಾರ ಸಮಿತಿ ಎಲ್ಲ ಕೆಳಹಂತದ ನ್ಯಾಯಾಲಯಗಳಿಗೆ ಇತ್ತೀಚೆಗೆ ನಿರ್ದೇಶನ ನೀಡಿತ್ತು. ಅದರಂತೆ ಸ್ಥಳೀಯ ಸೆಷನ್ಸ್ ನ್ಯಾಯಾಲಯವು ರಾಜಪಿಪ್ಲಾ ಜೈಲಿನ ಇಬ್ಬರು ಕೈದಿಗಳ ಬಿಡುಗಡೆಗೆ ಆದೇಶ ನೀಡಿತ್ತು. ಆದರೆ, ಈ ಇಬ್ಬರು ಕೈದಿಗಳು ಜೈಲಿನಿಂದ ತಮ್ಮನ್ನು ಹೊರಗೆ ಕಳಿಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಸೂಚನೆಯಂತೆ ರಾಜಪಿಪ್ಲಾ ಜೈಲಿನ 177 ಕೈದಿಗಳ ಪೈಕಿ ಒಟ್ಟು 22 ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಆದೇಶಿಸಲಾಗಿತ್ತು. ಈ 22 ಜನರನ್ನು ಸೆಷನ್ಸ್ ಕೋರ್ಟ್ನಲ್ಲಿ ಹಾಜರುಪಡಿಸಿದಾಗ ಇಬ್ಬರು ಜೈಲಿನಲ್ಲೇ ಇರಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಜೈಲಿನಲ್ಲಿರುವವರು ಯಾವಾಗ ಮುಕ್ತ ಜಗತ್ತಿಗೆ ಬರುತ್ತೇವೋ ಎಂದು ಕಾಯತ್ತಿರುತ್ತಾರೆ. ಆದರೆ, ಕೊರೊನಾ ವೈರಸ್ ಸೃಷ್ಟಿಸಿರುವ ಭೀತಿಯಿಂದ ಮುಕ್ತ ಜಗತ್ತು ಬೇಡ, ಬಂಧನದಲ್ಲೇ ಇರುತ್ತೇವೆ ಎನ್ನುವಂತಾಗಿದೆ.