ವಾಷಿಂಗ್ಟನ್ :ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಒಂದು ವಾರ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಮೂಲದ ಅಮೆರಿಕ ಸಂಸದೆ ತುಳಸಿ ಗಬ್ಬಾರ್ಡ್ ಮೋದಿಯವರನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ತುಳಸಿ, ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯಕ್ರಮ ಪೂರ್ವ ನಿಗದಿಯಾಗಿರುವ ಕಾರಣ, ’ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಭಾರತ, ವಿಶ್ವದ ಅತ್ಯಂತ ಪುರಾತನ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಅಮೆರಿಕದ ಅತ್ಯಂತ ಪ್ರಮುಖ ಸ್ನೇಹಿತ ರಾಷ್ಟ್ರವಾಗಿದೆ. ನಮ್ಮೆರಡೂ ರಾಷ್ಟ್ರಗಳನ್ನು ಹಾಗೂ ವಿಶ್ವದ ನಾನಾ ರಾಷ್ಟ್ರಗಳನ್ನು ಬಾಧಿಸುತ್ತಿರುವ ಹವಾಮಾನ ವೈಪರೀತ್ಯ ಸೇರಿ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕಿದೆ. ಆ ಮೂಲಕ ಉಭಯ ರಾಷ್ಟ್ರಗಳ ಜನತೆಯ ಆರ್ಥಿಕ ಔನ್ನತ್ಯಕ್ಕೆ ಶ್ರಮಿಸಬೇಕಿದೆ ಎಂದಿದ್ದಾರೆ.